ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಅವರ ಕನಸಿನ ಯೋಜನೆ 'ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್' (ಎನ್ಎಂಎಸಿಸಿ) ಉದ್ಘಾಟನಾ ಸಮಾರಂಭ ನೆರವೇರಿದೆ. ಮುಂಬೈನ ಬಾಂದ್ರಾ - ಕುರ್ಲಾ ಕಾಂಪ್ಲೆಕ್ಸ್ನ ಜಿಯೋ ವರ್ಲ್ಡ್ ಗಾರ್ಡನ್ಸ್ನಲ್ಲಿ ಶುಕ್ರವಾರ ರಾತ್ರಿ ಈ ಕಾರ್ಯಕ್ರಮ ನಡೆಯಿತು. ಮೂರು ದಿನಗಳ ಕಾಲ ಸಮಾರಂಭ ನಡೆಯಲಿದ್ದು, ಇಂದು ಕೂಡ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಎರಡು ದಿನ ಜರುಗಿದ ಸಮಾರಂಭದಲ್ಲಿ ಮುಖೇಶ್ ಅಂಬಾನಿ ಕುಟುಂಬ ಸೇರಿದಂತೆ ಸಿನಿ ಗಣ್ಯರು, ದೇಶ ವಿದೇಶದ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು. ಈ ಅದ್ಧೂರಿ ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿವೆ.
ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನ ಎರಡನೇ ದಿನದ ಸಮಾರಂಭದಲ್ಲಿ (1-4-23) ಬಾಲಿವುಡ್ ತಾರೆಯರು, ಹಾಲಿವುಡ್ ಸೆಲೆಬ್ರಿಟಿಗಳು, ಕೈಗಾರಿಕೋದ್ಯಮಿಗಳು ಸೇರಿದಂತೆ ಇತರೆ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಪದ್ಮಶ್ರೀ ಪುರಸ್ಕೃತೆ ಪ್ಯಾರಾಲಿಂಪಿಯನ್ ದೀಪಾ ಮಲಿಕ್ ಕೂಡ ಅದ್ಧೂರಿ ಲಾಂಚ್ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ, ಬಾಲಿವುಡ್ ಕಿಂಗ್ ಶಾರುಖ್ ಖಾನ್ ಪ್ಯಾರಾಲಿಂಪಿಯನ್ ದೀಪಾ ಮಲಿಕ್ ಅವರನ್ನು ಭೇಟಿಯಾದರು. ಇಬ್ಬರೂ ಪರಸ್ಪರ ಮಾತನಾಡುತ್ತಿರುವುದು ಕೂಡ ಕಂಡು ಬಂತು. ದೀಪಾ ಮಲಿಕ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಸುಂದರ ಕ್ಷಣವನ್ನು ಹಂಚಿಕೊಂಡಿದ್ದಾರೆ. ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಬಹುತೇಕರ ಮನ ಗೆಲ್ಲುತ್ತಿದೆ.
ಎರಡನೇ ದಿನ ನಡೆದ 'ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್'ನ 'ಇಂಡಿಯಾ ಇನ್ ಫ್ಯಾಷನ್' ಕಾರ್ಯಕ್ರಮದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಕೂಡ ಭಾಗವಹಿಸಿದ್ದರು. ಈ ಸಂಬಂಧ ವಿಡಿಯೋವೊಂದು ಹೊರಬಿದ್ದಿದ್ದು, ಇದರಲ್ಲಿ 'ಪಠಾಣ್' ತಾರೆ ಪ್ಯಾರಾಲಿಂಪಿಯನ್ ದೀಪಾ ಮಲಿಕ್ ಅವರಿಗೆ ಶುಭಾಶಯ ಕೋರಿದ್ದಾರೆ. ಕೆಲ ಕ್ಷಣ ಇಬ್ಬರೂ ಮಾತುಕತೆ ನಡೆಸಿದ್ದಾರೆ. ಶಾರುಖ್ ಅವರ ಈ ವಿಡಿಯೋ ಅವರ ಅಭಿಮಾನಿಗಳ ಹೃದಯ ಮುಟ್ಟಿದೆ. ದೀಪಾ ಮಲಿಕ್ ಕೂಡ ಈ ಕ್ಷಣವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. 'ನಿಮ್ಮನ್ನು ಮತ್ತೆ ಭೇಟಿಯಾಗಿದ್ದು ಸಂತೋಷವಾಗಿದೆ, ಒಮ್ಮೆ ಬಾದ್ಶಾ, ಎಂದಿಂದಿಗೂ ಬಾಲಿವುಡ್‌ನ ಕಿಂಗ್' ಎಂದು ಬರೆದುಕೊಂಡಿದ್ದಾರೆ.