ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಜವಾನ್'. ಈ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ನಿನ್ನೆ ತಮಿಳುನಾಡಿನಲ್ಲಿ ನಡೆಯಿತು. ಚೆನ್ನೈನ ಶ್ರೀ ಸಾಯಿರಾಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ನಿರ್ದೇಶಕ ಅಟ್ಲಿ, ಕಿಂಗ್ ಖಾನ್, ಪ್ರಿಯಾಮಣಿ, ವಿಜಯ್ ಸೇತುಪತಿ, ಗಾಯಕ ಅನಿರುದ್ಧ್ ರವಿಚಂದರ್ ಸೇರಿದಂತೆ ಗಣ್ಯಾತಿಗಣ್ಯರು ಭಾಗಿಯಾಗಿದ್ದರು. ಈ ವೇಳೆ ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ವಿಚಾರಗಳು ಹಾಗೂ ಅನುಭವಗಳನ್ನು ಹಂಚಿಕೊಂಡರು.
'ಜವಾನ್'ನಲ್ಲಿ ಶಾರುಖ್ ಖಾನ್ ಮತ್ತು ವಿಜಯ್ ಸೇತುಪತಿ ವಿರುದ್ಧ ರೋಲ್ಗಳನ್ನು ಪ್ಲೇ ಮಾಡಲಿದ್ದಾರೆ. ಬಾದ್ ಶಾ ನಾಯಕನಾಗಿ ನಟಿಸಿದರೆ, ವಿಜಯ್ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರೀ ರಿಲೀಸ್ ಈವೆಂಟ್ನಲ್ಲಿ ಮಾತನಾಡಿದ ವಿಜಯ್ ಸೇತುಪತಿ, ತಮ್ಮ ಶಾಲೆಯ ದಿನಗಳನ್ನು ನೆನಪಿಸಿಕೊಂಡರು. ಅಂದಿನ ಒಂದು ಘಟನೆಯನ್ನು ಉಲ್ಲೇಖಿಸಿದ ಅವರು 'ಜವಾನ್' ಮೂಲಕ ಶಾರುಖ್ ಖಾನ್ ವಿರುದ್ಧ ಸೇಡು ತೀರಿಸಿಕೊಂಡಿರುವುದಾಗಿ ಹೇಳಿದರು.
"ನಾನು ಶಾಲೆಯಲ್ಲಿ ಕಲಿಯುತ್ತಿರುವಾಗ ನನಗೆ ಒಂದು ಹುಡುಗಿಯ ಮೇಲೆ ಕ್ರಶ್ ಇತ್ತು. ಆದರೆ ಅವಳು ಶಾರುಖ್ ಖಾನ್ ಅವರನ್ನು ಹುಚ್ಚಿಯಂತೆ ಪ್ರೀತಿಸುತ್ತಿದ್ದಳು. ಇದೀಗ 'ಜವಾನ್' ಸಿನಿಮಾ ಮೂಲಕ ಶಾರುಖ್ ಖಾನ್ ಪ್ರತಿಸ್ಪರ್ಧಿಯಾಗಿ ಅವರ ಮೇಲಿನ ಸೇಡನ್ನು ತೀರಿಸಿಕೊಂಡಿದ್ದೇನೆ ಎಂದು ನಾನು ಭಾವಿಸುತ್ತೇನೆ" ಎಂದು ಹಾಸ್ಯಾಸ್ಪದವಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಿಂಗ್ ಖಾನ್, "ನೀವು ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಬಹುದು. ಆದರೆ ನನ್ನ ಹುಡುಗಿಯರನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಸದ್ಯ ಈ ಸಂಭಾಷಣೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿದೆ.