ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ 2023 ಬಹಳ ವಿಶೇಷ ವರ್ಷವಾಗುತ್ತಿದೆ. 2019ರ ನಂತರ ಸಿನಿಮಾ ಕೆಲಸಗಳಿಂದ ಕೊಂಚ ವಿರಾಮ ತೆಗೆದುಕೊಂಡಿದ್ದ ನಟ ಮೂರು ವರ್ಷಗಳ ಬಳಿಕ 'ಪಠಾಣ್' ಚಿತ್ರದೊಂದಿಗೆ ಕಮ್ಬ್ಯಾಕ್ ಮಾಡಿ ಗೆಲುವಿನ ನಗೆ ಬೀರಿದ್ದರು. ಹಲವರ ಕೆಂಗಣ್ಣಿಗೂ ಗುರಿಯಾಗಿ ತೆರೆಕಂಡ ಚಿತ್ರ ವಿಶ್ವದಾದ್ಯಂತ 1,050 ಕೋಟಿ ರೂಪಾಯಿಗೂ ಮೀರಿ ಕಲೆಕ್ಷನ್ ಮಾಡಿತ್ತು. ಸದ್ಯ ಅವರ ಬಹುನಿರೀಕ್ಷಿತ 'ಜವಾನ್' ಸಿನಿಮಾ ಕೂಡ ದೊಡ್ಡ ಮಟ್ಟದಲ್ಲೇ ಗೆಲುವು ಕಾಣುತ್ತಿದ್ದು, ಕಲೆಕ್ಷನ್ ವಿಚಾರದಲ್ಲಿ ದಾಖಲೆಯ ಓಟ ಮುಂದುವರೆಸಿದೆ.
ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿರುವ ಚಿತ್ರತಂಡ ಮುಂಬೈನ YRF ಸ್ಟುಡಿಯೋದಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಲು ಶುಕ್ರವಾರ ಮಾಧ್ಯಮಗೋಷ್ಟಿ ನಡೆಸಿತ್ತು. ಈ ವೇಳೆ ಸೂಪರ್ಸ್ಟಾರ್ ತಮ್ಮ ಮೂರು ವರ್ಷಗಳ ವಿರಾಮದ ಬಗ್ಗೆ ಮನಬಿಚ್ಚಿ ಮಾತನಾಡಿದರು. ಹೊಸ ಹುರುಪಿನೊಂದಿಗೆ 'ಪಠಾಣ್' ಸೆಟ್ಗೆ ಮರಳಲು ಅವರ ಮಗ ಆರ್ಯನ್ ಖಾನ್ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಕಿಂಗ್ ಖಾನ್ ಹೇಳಿದರು.
ಸಕ್ಸಸ್ ಮೀಟ್ನಲ್ಲಿ ಮಾತನಾಡಿದ ಎಸ್ಆರ್ಕೆ, "ಇಷ್ಟು ವರ್ಷಗಳ ಕಾಲ ಕೆಲಸ ಮಾಡದೇ ಮತ್ತೆ ಇಂಡಸ್ಟ್ರಿಗೆ ಮರಳುವಾಗ ತುಂಬಾ ನರ್ವಸ್ ಆಗಿದ್ದೆ. ಮೂರು ವರ್ಷಗಳ ನಂತರ ಸೆಟ್ಗೆ ಮರಳುತ್ತಿರುವುದು ನನಗೆ ತುಂಬಾ ಹೊಸತು ಅನಿಸಿತು" ಎಂದು ಹೇಳಿದರು. ಶಾರುಖ್ ಖಾನ್ ಮತ್ತೆ ಇಂಡಸ್ಟ್ರಿಗೆ ಮರಳುವಾಗ ಕೊಂಚ ಭಯಪಟ್ಟಿದ್ದರು ಎಂಬುದಾಗಿ ಬಹಿರಂಗಪಡಿಸಿದರು.
ಇದನ್ನೂ ಓದಿ:'ಜವಾನ್' ಸಕ್ಸಸ್ ಮೀಟ್ನಲ್ಲಿ ಚಿತ್ರತಂಡ, ನಯನತಾರಾ ಮಿಸ್ಸಿಂಗ್
ಮುಂದುವರೆದು ಮಾತನಾಡಿದ ಅವರು, "ನನ್ನ ಹಿರಿಯ ಮಗ ಆರ್ಯನ್ ಖಾನ್ ಹೇಳಿದ, 'ನಾವು ನಿಮ್ಮ ಚಿತ್ರಗಳನ್ನು ನೋಡುತ್ತಾ ಬೆಳೆದೆವು. ನಿಮ್ಮ ಸ್ಟಾರ್ಡಮ್ ಹೇಗಿದೆ ಎಂಬುದು ನಮಗೆ ತಿಳಿದಿದೆ. ಸುಹಾನಾ ಖಾನ್ಗೂ (ಮಗಳು) ಗೊತ್ತಿದೆ. ಆದರೆ ಆ ಪುಟ್ಟ ಮಗುವಿಗೆ (ಅಬ್ರಾಂ ಖಾನ್) ನೀನೊಬ್ಬ ಸ್ಟಾರ್ ಅನ್ನೋದು ಗೊತ್ತು. ಆದರೆ ನಿನ್ನ ಸ್ಟಾರ್ಡಮ್ ಅನ್ನು ಅವನು ನೋಡಿಲ್ಲ, ಅನುಭವಿಸಿಲ್ಲ. ಆದ್ದರಿಂದ ಮುಂದಿನ 5 ಸಿನಿಮಾ, ದಯವಿಟ್ಟು ತುಂಬಾ ಶ್ರಮವಹಿಸಿ. ಅವನು ಕೂಡ ಗಾಳಿಯಲ್ಲಿ ತೇಲಾಡುವ ಅನುಭವ ಪಡೆಯುತ್ತಾನೆ. ಅವನು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ಗೌರವಿಸುತ್ತಾನೆ" ಎಂದು ಮಗ ಹುರಿದುಂಬಿಸುವ ಮಾತುಗಳನ್ನು ವೇದಿಕೆಯಲ್ಲಿ ಉಲ್ಲೇಖಿಸಿದರು.
ಜೊತೆಗೆ, ಕಳೆದ 29 ವರ್ಷಗಳಿಂದ ತಮ್ಮ ಸಿನಿಮಾಗಳ ಯಶಸ್ಸಿಗಾಗಿ ಸಾಕಷ್ಟು ಕಷ್ಟಪಟ್ಟಿದ್ದೇನೆ ಎಂದು ಹೇಳಿದರು. ರಾಜ್ಕುಮಾರ್ ಹಿರಾನಿ ಅವರೊಂದಿಗಿನ ಮುಂಬರುವ 'ಡಂಕಿ' ಚಿತ್ರ ಈ ವರ್ಷ ಕ್ರಿಸ್ಮಸ್ನಲ್ಲಿ ಬಿಡುಗಡೆಯಾಗಲಿದೆ ಎಂದು ಇದೇ ವೇಳೆ ತಿಳಿಸಿದರು. ಇನ್ನೂ ಎಲ್ಲೆಡೆ ಧೂಳೆಬ್ಬಿಸುತ್ತಿರುವ ಜವಾನ್ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 400 ಕೋಟಿ ರೂ. ಗಡಿ ದಾಟಿದ್ದರೆ, ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಈವರೆಗೆ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ:ಭಾರತದಲ್ಲಿ 400, ವಿಶ್ವದಲ್ಲಿ 700: ಸಾವಿರ ಕೋಟಿ ರೂ. ಕಲೆಕ್ಷನ್ ಮಾಡುತ್ತಾ 'ಜವಾನ್'?!