ಮುಂಬೈ (ಮಹಾರಾಷ್ಟ್ರ):ಹಿರಿತೆರೆಯಲ್ಲಿ ಆ್ಯಕ್ಷನ್ ಹೀರೋ ಆಗಬೇಕೆಂಬ 32 ವರ್ಷಗಳ ಕನಸು ಇಂದು ಈಡೇರುತ್ತಿದೆ ಎಂದು ಬಾಲಿವುಡ್ನ 'ಕಿಂಗ್ ಆಫ್ ರೊಮ್ಯಾನ್ಸ್', ನಟ ಶಾರುಖ್ ಖಾನ್ ಬಹಿರಂಗಪಡಿಸಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ 'ಶಾರುಖ್ ಖಾನ್ ಜೊತೆ ಪಠಾಣ್ ಸಂಭಾಷಣೆ' ಎಂಬ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಶಾರುಖ್ ಖಾನ್ ಆ್ಯಕ್ಷನ್ ಹೀರೋ ಆಗುವ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ, ತಮ್ಮ ಸಿನಿ ಜರ್ನಿ ಬಗ್ಗೆಯೂ ಅವರು ಚುಟುಕಾಗಿ ಮೆಲುಕು ಹಾಕಿದ್ದಾರೆ.
'ನಾನು 32 ವರ್ಷಗಳ ಹಿಂದೆ ಆ್ಯಕ್ಷನ್ ಹೀರೋ ಆಗಬೇಕೆಂದು ಚಿತ್ರರಂಗಕ್ಕೆ ಬಂದೆ. ಆದರೆ, ನನ್ನನ್ನು ರೊಮ್ಯಾಂಟಿಕ್ ಹೀರೋ ಮಾಡಿದರು. ಏನೋ ಆಗಬೇಕೆಂದು ಕೊಂಡವನು ಏನೋ ಆದೆ. ಕೇವಲ ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳಬೇಕೆಂದು ಬಯಸಿದ್ದೆ. ಆದರೆ, ಆಗಿದ್ದೇ ಬೇರೆ ಎಂದು ಅವರು ಹೇಳಿಕೊಂಡಿದ್ದಾರೆ. ಸಿನಿಮಾ ಪ್ರೇಮಿಯಾಗಿ ಎಲ್ಲರಂತೆ ನಾನು 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಚಿತ್ರವನ್ನು ಬಹಳ ಇಷ್ಟಪಡುತ್ತೇನೆ. ರಾಹುಲ್, ರಾಜ್ ಸೇರಿದಂತೆ ಚಿತ್ರದ ಎಲ್ಲ ಪಾತ್ರಗಳನ್ನು ಪ್ರೀತಿಸುತ್ತೇನೆ.
ಆದರೆ, ಈ ಚಿತ್ರದ ಬಳಿಕ ನನನ್ನು ರೊಮ್ಯಾಂಟಿಕ್ ಹೀರೋ ಮಾಡಿದರು. ಹಾಗಾಗಿ ಆ್ಯಕ್ಷನ್ ಹೀರೋ ಆಸೆ ಕಮರಿತು. ಆಕ್ಷನ್ ಹೀರೋ ಆಗುವ ಆಸೆ ಆಗಾಗ ಕಾಡುತ್ತಿತ್ತು. ಇದೀಗ ಕೂಡಿ ಬಂದಿದೆ. ಇದು ಕನಸೋ ನನಸೋ ಗೊತ್ತಾಗುತ್ತಿಲ್ಲ ಎಂದಿದ್ದಾರೆ. ಸದ್ಯ ಅವರ ನಟನೆಯ ಬಹುನಿರೀಕ್ಷಿತ 'ಪಠಾಣ್' ಚಿತ್ರವು ಆ್ಯಕ್ಷನ್ ಮತ್ತು ಸಾಹಸಮ ದೃಶ್ಯಗಳಿಂದ ಕೂಡಿದ್ದು ಇದೇ ಜನವರಿ 25 ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. ಶಾರುಖ್ ಖಾನ್ ಜೊತೆಯಾಗಿ ದೀಪಿಕಾ ಪಡುಕೋಣೆ ನಾಯಕಿಯ ಪಾತ್ರ ಹಂಚಿಕೊಂಡಿದ್ದಾರೆ.
ನಂಬರ್ ಒನ್ ಜೋಡಿ: 'ಓಂ ಶಾಂತಿ ಓಂ', 'ಚೆನ್ನೈ ಎಕ್ಸ್‌ಪ್ರೆಸ್' ಮತ್ತು 'ಹ್ಯಾಪಿ ನ್ಯೂ ಇಯರ್' ಚಿತ್ರಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿರುವ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೋಡಿ ಕಮಾಲ್ ಮಾಡಿತ್ತು. ಅಲ್ಲದೇ ಈ ಜೋಡಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ನಂಬರ್ ಒನ್ ಎಂದು ಸಾಬೀತುಪಡಿಸಿತ್ತು. ಬಹಳ ವರ್ಷಗಳ ತರುವಾಯ ಮತ್ತೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಬಾಲಿವುಡ್ ಚಿತ್ರರಂಗ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ.
ದೀಪಿಕಾ ಪಡುಕೋಣೆ ನಟನೆಯ ಬಗ್ಗೆ ಮೆಚ್ಚುಗೆ: 'ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರಂತಹ ನಟಿಯರು ಬೇಕು. ಅವರ ನಟನೆ ಅದ್ಭುತವಾಗಿ ಮೂಡಿ ಬಂದಿದೆ. ಸಿನಿಮಾ ನೋಡುಗರ ಆಸೆಯನ್ನು ಪೂರೈಸುವುದು ಅಷ್ಟು ಸುಲಭದ ಕೆಲಸವಲ್ಲ. ಅದನ್ನು ದೀಪಿಕಾ ಪಡುಕೋಣೆ ಅವರು ಮಾಡಿದ್ದಾರೆ. ಅವರಂತಹ ನಟಿಯಿಂದ ಮಾತ್ರ ಇಂತಹ ಪಾತ್ರಗಳನ್ನು ಮಾಡಲು ಸಾಧ್ಯ ಎಂದು ನಟಿಯ ಬಗ್ಗೆಯೂ ಶಾರುಖ್ ಖಾನ್ ಹಾಡಿ ಹೊಗಳಿದ್ದಾರೆ.
ಚಿತ್ರದ ಬಜೆಟ್ 250 ಕೋಟಿ ರೂ.:ಇತ್ತೀಚೆಗೆ, 'ಪಠಾಣ್' ಚಿತ್ರದ ಟ್ರೈಲರ್ ಅನ್ನು ದುಬೈನ ಬುರ್ಜ್ ಖಲೀಫಾದಲ್ಲಿ ತೋರಿಸುವ ಮೂಲಕ ಬಿಡುಗಡೆ ಮಾಡಲಾಯಿತು. ಟ್ರೈಲರ್ ಸದ್ಯ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಜನವರಿ 25 ರಂದು ಬಿಡುಗಡೆಯಾಗಲಿದ್ದು, ಚಿತ್ರತಂದ ಪ್ರಚಾರದಲ್ಲಿ ತೊಡಗಿದೆ. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೊತೆ ಜಾನ್ ಅಬ್ರಹಾಂ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶ ಹೇಳಿದ್ದು, ಆದಿತ್ಯ ಚೋಪ್ರಾ ಮತ್ತು ಅಲೆಕ್ಸಾಂಡರ್ ದೋಸ್ಟಲ್ ನಿರ್ಮಾಪಣ ಹೊಣೆ ಹೊತ್ತುಕೊಂಡಿವೆ. 250 ಕೋಟಿ ರೂ. ಈ ಚಿತ್ರದ ಬಜೆಟ್ ಆಗಿದೆ.
ಇದನ್ನೂ ಓದಿ:ಮತ್ತೆ ತಾಯಿಯಾಗುತ್ತಿದ್ದಾರಾ ಆಲಿಯಾ ಭಟ್? ಮುಂಬೈ ಪ್ರೆಸ್ಕ್ಲಬ್ ಕಾರ್ಯಕ್ರಮದಲ್ಲಿ ಭಾಗಿಯಾದ ತಾರಾ ಜೋಡಿ