ಶಾರುಖ್ ಖಾನ್ ವಿಭಿನ್ನ ಸ್ಟಾರ್ಡಮ್ ಹೊಂದಿರುವ ಬಗ್ಗೆ ಯಾವುದೇ ಅನುಮಾನವಿಲ್ಲ. ಇಡೀ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಾರೆ. ಶಾರುಖ್ ಸಹ ಅಭಿಮಾನಿಗಳಿಗೆ ಹೆಚ್ಚಿನ ಸಮಯ ಮೀಸಲಿಡುತ್ತಾರೆ. ಕೆಲವು ಬಾರಿ ಅಂತಹ ಪರಿಸ್ಥಿತಿಗಳಿಂದ ಹೊರಬರಲು ಎಸ್‌ಆರ್‌ಕೆ ಹರಸಾಹಸ ಪಡೋದುಂಟು.
ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಸೂಪರ್ ಸ್ಟಾರ್ ಕಾಣಿಸಿಕೊಂಡಿದ್ದರು. ನಿರೀಕ್ಷೆಯಂತೆ ಅವರ ಸುತ್ತ ಅಭಿಮಾನಿಗಳು ಬಂದು ಸೇರಿದರು. ಅಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಶಾಂತವಾಗಿರುವ ಎಸ್‌ಆರ್‌ಕೆ, ಈ ಬಾರಿ ಅಭಿಮಾನಿಯೊಬ್ಬರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಶಾಂತತೆಯನ್ನು ಕಳೆದುಕೊಂಡರು.
ಆನ್ಲೈನ್ನಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ, ಶಾರುಖ್ ಖಾನ್ ಸಂಪೂರ್ಣ ಕಪ್ಪು ಬಣ್ಣದ ಉಡುಪನ್ನು ಧರಿಸಿ ಬರುತ್ತಿರುವುದನ್ನು ಕಾಣಬಹುದು. ಅಭಿಮಾನಿಗಳು ಅವರನ್ನು ಸುತ್ತುವರೆದರು. ಎಸ್‌ಆರ್‌ಕೆ ಮುಂದೆ ಸಾಗುತ್ತಿದ್ದಂತೆ, ಅಭಿಮಾನಿಗಳು ಶಾರುಖ್.. ಶಾರುಖ್.. ಎಂದು ಕೂಗತೊಡಗಿದರು. ನಟನೊಂದಿಗೆ ಬಾಡಿಗಾರ್ಡ್ಸ್, ಮ್ಯಾನೇಜರ್ ಸಹ ಇದ್ದರು. ಆದಾಗ್ಯೂ, ಪಠಾಣ್ ನಟ ತಮ್ಮ ಶಾಂತತೆ ಕಳೆದುಕೊಂಡಿದ್ದಾರೆ. ಫೋಟೋ ತೆಗೆದುಕೊಳ್ಳಲು ಪ್ರಯತ್ನಿಸಿದ ಅಭಿಮಾನಿಯನ್ನು ದೂರ ಸರಿಸಿದ್ದಾರೆ.
ಪಾಪರಾಜಿ ಖಾತೆಯಿಂದ ಈ ವಿಡಿಯೋ ಹೊರಬಿದ್ದ ತಕ್ಷಣ ಸಾಮಾಜಿಕ ಮಾಧ್ಯಮ ಬಳಕೆದಾರರು ನಟನ ನಡವಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಸ್‌ಆರ್‌ಕೆ ಅವರ ನಡವಳಿಕೆ ಮತ್ತು ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಪ್ರಯತ್ನಿಸಿದ ಅಭಿಮಾನಿಯನ್ನು ಅವರು ತಳ್ಳಿದ ರೀತಿಗೆ ಕೆಲ ನೆಟಿಜನ್‌ಗಳು ಅಸಮಾಧಾನಗೊಂಡಿದ್ದಾರೆ. ಮತ್ತೆ ಕೆಲವರು ಶಾರುಖ್ ಬೆಂಬಲಕ್ಕೆ ನಿಂತಿದ್ದಾರೆ.