ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ 'ಜವಾನ್' ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅಭಿನಯದ ಸಿನಿಮಾ ಕ್ರೇಜ್ ಜೋರಾಗೇ ಇದೆ. ದೇಶ ಮಾತ್ರವಲ್ಲದೇ ಸಾಗರೋತ್ತರ ಪ್ರದೇಶಗಳಲ್ಲೂ ಸಿನಿಮಾ ವೀಕ್ಷಿಸಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ. ಅಡ್ವಾನ್ಸ್ ಟಿಕೆಟ್ ಬುಕಿಂಗ್ ಪ್ರೊಸೆಸ್ಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಜಾಗತಿಕ ಮಟ್ಟದಲ್ಲಿ ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್ ಉತ್ತಮವಾಗಿ ಸಾಗಿದ್ದು, ಸುಮಾರು 45 ಕೋಟಿ ರೂ.ನಷ್ಟು ವ್ಯವಹಾರ ನಡೆದಿದೆ ಎನ್ನಲಾಗುತ್ತಿದೆ.
ಪಠಾಣ್ ಹಿಂದಿಕ್ಕುತ್ತಾ ಜವಾನ್?: ಸಖತ್ ಸೌಂಡ್ ಮಾಡುತ್ತಿರುವ ಜವಾನ್ ಸಿನಿಮಾ ಈಗಾಗಲೇ ಒಂದು ಮಿಲಿಯನ್ಗೂ ಹೆಚ್ಚು ಟಿಕೆಟ್ಗಳನ್ನು ಮಾರಾಟ ಮಾಡಿದೆ. 1 ಮಿಲಿಯನ್ ಮುಂಗಡ ಟಿಕೆಟ್ ಮಾರಾಟ ಮಾಡಿರುವ ಎರಡನೇ ಬಾಲಿವುಡ್ ಚಿತ್ರವಿದು. 2023ರ ಆರಂಭದಲ್ಲಿ ತೆರೆಕಂಡು ಧೂಳೆಬ್ಬಿಸಿದ್ದ ಪಠಾಣ್ ಸಿನಿಮಾದಂತೆ ಜವಾನ್ ಸಹ ಸೂಪರ್ ಹಿಟ್ ಆಗುವ ಸೂಚನೆ ಕೊಟ್ಟಿದೆ.
ಪಠಾಣ್ ಸಿನಿಮಾ 1.08 ಮಿಲಿಯನ್ ಅಡ್ವಾನ್ಸ್ ಟಿಕೆಟ್ಸ್ ಮಾರಾಟ ಮಾಡಿತ್ತು. ಸಿನಿಮಾ ಬಿಡುಗಡೆಗೆ ಕೆಲವೇ ಕ್ಷಣಗಳು ಬಾಕಿ ಇದ್ದು, ಚಿತ್ರ ಈಗಾಗಲೇ 1 ಮಿಲಿಯನ್ ಮೈಲಿಗಲ್ಲನ್ನು (ಬೆಳಗ್ಗಿನ ಮಾಹಿತಿ, ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಿದೆ) ದಾಟಿದೆ. ಪಠಾಣ್ ದಾಖಲೆ ಮೀರಿಸಲಿದೆ ಎಂಬ ವಿಶ್ವಾಸವಿದೆ. ಬಾಲಿವುಡ್ ಇತಿಹಾಸದಲ್ಲಿ ಮೊದಲ ದಿನಕ್ಕೆ ಸಿನಿಮಾ ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಅಡ್ವಾನ್ಸ್ ಟಿಕೆಟ್ಸ್ ಮಾರಾಟ ಮಾಡುವ ಮೂಲಕ ಜವಾನ್ ದಾಖಲೆ ಬರೆದಿದೆ ಎಂದು ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ತಿಳಿಸಿದ್ದಾರೆ.
ಮೊದಲ ದಿನ ದಾಖಲೆ ಬರೆಯಲಿದೆಯಾ ಜವಾನ್?: ಮೊದಲ ದಿನ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಹಿಂದಿ ಚಿತ್ರರಂಗದಲ್ಲಿ ದಿ ಬೆಸ್ಟ್ ಓಪನರ್ ಸಿನಿಮಾ ಆಗಿ ಜವಾನ್ ಹೊರಹೊಮ್ಮಲಿದೆಯೆಂಬ ನಿರೀಕ್ಷೆ ಇದೆ. ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಜವಾನ್ ಸಿನಿಮಾ ದೇಶೀಯ ಮಾರುಕಟ್ಟೆಯಲ್ಲೇ ಬರೋಬ್ಬರಿ 80 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಲಿದೆ. ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 125 ಕೋಟಿ ರೂ. ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.