ಬಾಲಿವುಡ್ ನಟ ಶಾರುಖ್ ಖಾನ್ ಅಮೆರಿಕದಲ್ಲಿ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ಭಾರತಕ್ಕೆ ಮರಳುವ ಮುನ್ನ ಲಾಸ್ ಏಂಜಲೀಸ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ, ಲಾಸ್ ಏಂಜಲೀಸ್ನಲ್ಲಿ ನಡೆದ ಸಣ್ಣ ಅವಘಡದಲ್ಲಿ ಶಾರುಖ್ ಮೂಗಿಗೆ ಗಾಯವಾಗಿದೆ. ಹೀಗಾಗಿ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಎಸ್ಆರ್ಕೆ ಅಪಘಾತವನ್ನು ಹೇಗೆ ಎದುರಿಸಿದರು ಎಂಬ ಬಗ್ಗೆ ಹೆಚ್ಚು ವಿವರಗಳು ಹೊರಬಿದ್ದಿಲ್ಲ. ಆದರೆ ನಟನ ಮೂಗಿಗೆ ಗಾಯವಾಗಿ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆತಂಕಪಡುವ ಅಗತ್ಯವಿಲ್ಲ ಎಂದು ಎಸ್ಆರ್ಕೆ ತಂಡಕ್ಕೆ ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ. ಸಣ್ಣ ಶಸ್ತ್ರಚಿಕಿತ್ಸೆಯ ನಂತರ ನಟನ ಮೂಗಿಗೆ ಬ್ಯಾಂಡೇಜ್ ಹಾಕಲಾಗಿದೆ. ಖಾನ್ ಅವರ ತಂಡವು ಶಾರುಖ್ ಆರೋಗ್ಯ ಸ್ಥಿತಿಯನ್ನು ಇನ್ನೂ ಬಹಿರಂಗಪಡಿಸಿದೇ ಇದ್ದರೂ, ಅವರು ಮುಂಬೈಗೆ ಮರಳಿದ್ದಾರೆ ಹಾಗೂ ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:Satyaprem Ki Katha: 5 ದಿನಗಳಲ್ಲಿ 40 ಕೋಟಿ ರೂ. ಗಡಿದಾಟಿದ 'ಸತ್ಯಪ್ರೇಮ್ ಕಿ ಕಥಾ'
ಬಹುನಿರೀಕ್ಷಿತ 'ಜವಾನ್' ಸಿನಿಮಾ..:ಶಾರುಖ್ ಖಾನ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಜವಾನ್'. ಕಂಪ್ಲೀಟ್ ಆ್ಯಕ್ಷನ್ ಥ್ರಿಲ್ಲರ್ ಜವಾನ್ ಚಿತ್ರವು ಸೆಪ್ಟೆಂಬರ್ 7ಕ್ಕೆ ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ. ಸದ್ಯದಲ್ಲೇ ಟೀಸರ್ ಬಿಡುಗಡೆಯಾಗಲಿದೆ. ಜವಾನ್ ಟೀಸರ್ ಅನಾವರಗೊಳಿಸಲು ಚಿತ್ರತಂಡದ ಬಳಿ ಎರಡು ದಿನಾಂಕಗಳಿವೆ. ಜುಲೈ 7 ಅಥವಾ 15ರಂದು ಜವಾನ್ ಟೀಸರ್‌ನ ಗ್ರ್ಯಾಂಡ್ ಲಾಂಚ್ಗಾಗಿ ಸಿದ್ಧತೆಗಳು ನಡೆಯುತ್ತಿವೆ.
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯನ್ನು ಆಹ್ವಾನಿಸಲಿದ್ದು, ಅವರ ಸಮಯ ಮತ್ತು ಚಿತ್ರತಂಡದ ಯೋಜನೆ ಗಮನದಲ್ಲಿಟ್ಟುಕೊಂಡು ದಿನಾಂಕ ಅಂತಿಮಗೊಳಿಸಲಾಗುವುದು. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳ ನಡುವೆ ಜವಾನ್ ಟೀಸರ್ ಅನಾವರಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ. ಸಿನಿಮಾ ಪ್ರಚಾರಕ್ಕೆ ಶಾರುಖ್ ಖಾನ್ ಪಠಾಣ್ ತಂತ್ರವನ್ನು ಬಳಸುವ ಯೋಚನೆಯಲ್ಲಿದ್ದಾರೆ ಎಂದು ಸಹ ಹೇಳಲಾಗಿದೆ. ಅಂದರೆ ಮೊದಲು ಚಿತ್ರದ ಹಾಡನ್ನು ಬಿಡುಗಡೆ ಮಾಡಿ, ಬಳಿಕ ಟೀಸರ್, ಟ್ರೇಲರ್ ಅನಾವರಣಗೊಳಿಸುವ ಯೋಚನೆಯೂ ಇದೆ.
ಈ ವರ್ಷದ ನಿರೀಕ್ಷಿತ ಮತ್ತು ದುಬಾರಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜವಾನ್ ಚಿತ್ರವನ್ನು ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸಂಸ್ಥೆ ನಿರ್ಮಿಸುತ್ತಿದ್ದು, ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾದ ಅಟ್ಲೀ ನಿರ್ದೇಶನ ಮಾಡಿದ್ದಾರೆ. ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಸೇರಿದಂತೆ ಹಲವು ಪ್ರಸಿದ್ಧ ಕಲಾವಿದರು ಅಭಿನಯಿಸಿದ್ದಾರೆ. ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಅನಿರುದ್ಧ್ ರವಿಚಂದರ್ ಈ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ.
ಇದನ್ನೂ ಓದಿ:ಸಿದ್ಧಾರ್ಥ್ ಮಲ್ಹೋತ್ರಾ - ದಿಶಾ ಪಟಾನಿ 'ಯೋಧ' ಸಿನಿಮಾ ಮುಂದೂಡಿಕೆ: ಥಿಯೇಟರ್ನಲ್ಲಿ ಒಮ್ಮೆಲೇ 6 ಸಿನಿಮಾಗಳು ಎಂಟ್ರಿ..