ಪಠಾಣ್ ಚಿತ್ರದ ಅದ್ಭುತ ಯಶಸ್ಸಿನ ನಂತರ ಶಾರುಖ್ ಖಾನ್ ಬ್ಯಾಕ್ ಟು ಬ್ಯಾಕ್ ಸಿನಿಮಾ ಶೂಟಿಂಗ್ಗಳಲ್ಲಿ ನಿರತರಾಗಿದ್ದಾರೆ. 'ಜವಾನ್' ಮತ್ತು 'ಡಂಕಿ' ಎಸ್ಆರ್ಕೆ ಅಭಿನಯದ ಬಹುನಿರೀಕ್ಷಿತ ಚಿತ್ರ. ಸದ್ಯ ಬಾಲಿವುಡ್ ಕಿಂಗ್ ಖಾನ್ 'ಡಂಕಿ' ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.
ಈಗಾಗಲೇ ಲಂಡನ್, ಸೌದಿ ಅರೇಬಿಯಾದಲ್ಲಿ ಶೂಟಿಂಗ್ ಮುಗಿಸಿಸಿರುವ ಸೂಪರ್ ಸ್ಟಾರ್ ಚಿತ್ರದ ಮುಂದಿನ ಶೆಡ್ಯೂಲ್ಗಾಗಿ ಕಾಶ್ಮೀರಕ್ಕೆ ಭೇಟಿ ಕೊಟ್ಟಿದ್ದಾರೆ. ಕಾಶ್ಮೀರದಿಂದ ಶಾರುಖ್ ಖಾನ್ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ ಬಾಲಿವುಡ್ ನಟಿ ತಾಪ್ಸಿ ಪನ್ನು ಅವರೊಂದಿಗೆ ಎಸ್ಆರ್ಕೆ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕಾಶ್ಮೀರದ ಸೋನಾಮಾರ್ಗ್‌ನಲ್ಲಿರುವ ಹೋಟೆಲ್‌ಗೆ ಸೂಪರ್‌ಸ್ಟಾರ್ ಪ್ರವೇಶಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು.
ವೈರಲ್ ವಿಡಿಯೋಗಳಲ್ಲಿ ಶಾರುಖ್ ಖಾನ್ ಮತ್ತು ಸಹನಟಿ ತಾಪ್ಸಿ ಪನ್ನು 'ಡಂಕಿ' ಸೆಟ್‌ನಲ್ಲಿರುವುದು ಕಂಡುಬಂದಿದೆ. ಈ ದೃಶ್ಯಗಳನ್ನು ನೋಡಿದರೆ ಇಬ್ಬರೂ ಶಾಪಿಂಗ್ ಸೀಕ್ವೆನ್ಸ್‌ಗಾಗಿ ಶೂಟಿಂಗ್ ಮಾಡುತ್ತಿರುವಂತೆ ಕಾಣುತ್ತಿದೆ. ಶಾರುಖ್ ಕೆಂಪು ಬಣ್ಣದ ಜಾಕೆಟ್ ಧರಿಸಿದ್ದಾರೆ. ತಾಪ್ಸಿ ಪನ್ನು ಚಳಿಗಾಲದ ಜಾಕೆಟ್ ತೊಟ್ಟಿದ್ದಾರೆ.
ಟ್ವಿಟ್ಟರ್ ಬಳಕೆದಾರರು ಶಾರುಖ್ ಮತ್ತು ತಾಪ್ಸಿ ಅವರ ವಿಡಿಯೋ ಮತ್ತು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಶೀರ್ಷಿಕೆಯಲ್ಲಿ, ಕಾಶ್ಮೀರದಲ್ಲಿ 'ಡಂಕಿ ಫಿಲ್ಮ್ ಸಾಂಗ್ ಶೂಟಿಂಗ್' ಎಂದು ಬರೆದುಕೊಂಡಿದ್ದಾರೆ. ಆನ್ಲೈನ್ನಲ್ಲಿ ಸದ್ದು ಮಾಡುತ್ತಿರುವ ದೃಶ್ಯಗಳು ಅಭಿಮಾನಿಗಳ ಮೆಚ್ಚುಗೆ ಸಂಪಾದಿಸುವ ಜೊತೆಗೆ ಕುತೂಹಲ ಹೆಚ್ಚಿಸಿದೆ.