ಕರ್ನಾಟಕ

karnataka

ETV Bharat / entertainment

ಶಾರುಖ್​ ಖಾನ್​ಗೆ ಜೀವ ಬೆದರಿಕೆ: Y+​ ಭದ್ರತೆ ಒದಗಿಸಿದ ಮಹಾರಾಷ್ಟ್ರ ಸರ್ಕಾರ

ಜೀವ ಬೆದರಿಕೆಗಳನ್ನು ಎದುರಿಸುತ್ತಿರುವ ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ಅವರಿಗೆ ಮಹಾರಾಷ್ಟ್ರ ಸರ್ಕಾರವು Y+​ ಭದ್ರತೆ ಒದಗಿಸಿದೆ.

Shah Rukh Khan gets Y Plus security after death threats
ಶಾರುಖ್​ ಖಾನ್​ಗೆ ಜೀವ ಬೆದರಿಕೆ; Y+​ ಭದ್ರತೆ ಒದಗಿಸಿದ ಮಹಾರಾಷ್ಟ್ರ ಸರ್ಕಾರ

By ETV Bharat Karnataka Team

Published : Oct 9, 2023, 11:29 AM IST

ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ಜೀವ ಬೆದರಿಕೆಗಳನ್ನು ಎದುರಿಸುತ್ತಿರುವ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರವು ನಟನಿಗೆ Y+​ ಭದ್ರತೆ ಒದಗಿಸಿದೆ. ಇತ್ತೀಚೆಗೆ ಅವರ ಸಿನಿಮಾಗಳು ಬಿಡುಗಡೆಯಾಗಿ ಸೂಪರ್​ ಹಿಟ್​ ಆದ ಬೆನ್ನಲ್ಲೇ ಅಪರಿಚಿತ ಬೆದರಿಕೆ ಕರೆಗಳು ಬರುತ್ತಿದ್ದವು. ಈ ಹಿನ್ನೆಲೆ ಬಾದ್​ ಶಾಗೆ ಹೆಚ್ಚಿನ ಸೆಕ್ಯೂರಿಟಿ ಸಿಕ್ಕಿದ್ದು, Y+ ಭದ್ರತೆ ಅಡಿ ನಟನೊಂದಿಗೆ ದಿನಪೂರ್ತಿ 24 ಗಂಟೆಗಳ ಕಾಲ ಆರು ವೈಯಕ್ತಿಕ ಭದ್ರತಾ ಅಧಿಕಾರಿಗಳು ಮತ್ತು ಐದು ಶಸ್ತ್ರಸಜ್ಜಿತ ಗಾರ್ಡ್​ಗಳು ಇರುತ್ತಾರೆ.

ವರದಿಗಳ ಪ್ರಕಾರ, ಶಾರುಖ್​ ಖಾನ್​ ಅವರ ಈ ವರ್ಷದ ಎರಡು ಸಿನಿಮಾಗಳು 'ಪಠಾಣ್'​ ಮತ್ತು 'ಜವಾನ್'​ ಸೂಪರ್​ ಹಿಟ್​ ಕಂಡಿದೆ. ಜೊತೆಗೆ ಅನೇಕ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಈ ಬೆನ್ನಲ್ಲೇ ನಟನಿಗೆ ಬೆದರಿಕೆ ಕರೆಗಳು ಬರಲು ಪ್ರಾರಂಭಿಸಿವೆ. ಅಪರಿಚಿತ ವ್ಯಕ್ತಿಗಳಿಂದ ಕೊಲೆ ಬೆದರಿಕೆಗಳು ಬಂದಿವೆ. ಹೆಚ್ಚಿನ ಅಪಾಯದಲ್ಲಿರುವ ನಟನಿಗೆ Y+ ಭದ್ರತೆ ಸಿಕ್ಕಿದೆ. ಅದರಂತೆ ಆರು ವೈಯಕ್ತಿಕ ಭದ್ರತಾ ಅಧಿಕಾರಿಗಳು (ಪಿಎಸ್​ಒಗಳು) ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಅವರ ನಿವಾಸದಲ್ಲಿ ಐದು ಶಸ್ತ್ರಸಜ್ಜಿತ ಗಾರ್ಡ್​ಗಳು ಕಾವಲಿರುತ್ತಾರೆ.

ಈ ಹಿಂದೆ ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್​ನ ಬೆದರಿಕೆಯ ನಂತರ ಕಳೆದ ವರ್ಷ ನಟ ಸಲ್ಮಾನ್​ ಖಾನ್​ಗೆ Y+ ಭದ್ರತೆಯನ್ನು ಒದಗಿಸಲಾಗಿತ್ತು. ಇವರಲ್ಲದೇ, ಅಮಿತಾಭ್​ ಬಚ್ಚನ್​, ಅಮೀರ್​ ಖಾನ್​, ಅಕ್ಷಯ್​ ಕುಮಾರ್​ ಮತ್ತು ಅನುಪಮ್​ ಖೇರ್​ ಸೇರಿದಂತೆ ಇತರ ಬಾಲಿವುಡ್​ ನಟರು ಈ Y+ ಭದ್ರತೆ ಹೊಂದಿದ್ದಾರೆ.

ಶಾರುಖ್​ ಖಾನ್​ ಅವರಿಗೆ ಈ ಹಿಂದೆ ರಕ್ಷಣೆಗೆ ಎಂದು ಇಬ್ಬರು ಪೊಲೀಸ್​ ಅಧಿಕಾರಿಗಳನ್ನು ಮಾತ್ರ ನಿಯೋಜಿಸಲಾಗಿತ್ತು. ಇದೀಗ ನಟ Y+ ಭದ್ರತೆಯಿಂದಾಗಿ ಒಟ್ಟು 11 ಭದ್ರತಾ ಸಿಬ್ಬಂದಿ ಹೊಂದಿರುತ್ತಾರೆ. ಪೊಲೀಸ್​ ಅಧಿಕಾರಿಗಳು ಅವರ ಮನೆಯ ಮುಂದೆಯೇ ಕಾವಲು ನಿಂತಿರುತ್ತಾರೆ.

ಅಕ್ಟೋಬರ್​ 5ರಂದು ರಾಜ್ಯ ಗೃಹ ಇಲಾಖೆಯು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್​) ಸೇರಿದಂತೆ ಹಿರಿಯ ಪೊಲೀಸ್​ ಅಧಿಕಾರಿಗಳು ಮತ್ತು ಇಲಾಖೆಗಳಿಗೆ ಪತ್ರ ಕಳುಹಿಸಿತ್ತು. "ನಟ ಶಾರುಖ್​ ಖಾನ್​ ಅವರಿಗೆ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆ ಅವರ ಭೇಟಿ/ಕಾರ್ಯಕ್ರಮದ ಸಮಯದಲ್ಲಿ ಮುಂದಿನ ಉನ್ನತ ಮಟ್ಟದ ಸಮಿತಿ ಶಿಫಾರಸು ಮತ್ತು ಪರಿಶೀಲನಾ ಸಮಿತಿಯ ನಿರ್ಧಾರದವರೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಪಾವತಿ ಆಧಾರದ ಮೇಲೆ Y+ ಭದ್ರತೆ ಒದಗಿಸಿ" ಎಂದು ತಿಳಿಸಿತ್ತು.

ಹಿರಿಯ ಪೊಲೀಸ್​ ಅಧಿಕಾರಿಗಳ ಪ್ರಕಾರ, ಶಾರುಖ್​ ಖಾನ್​ಗೆ ಬರುತ್ತಿರುವ ಬೆದರಿಕೆಗಳಿಂದ ಮುಂದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ನಟನ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮಹಾರಾಷ್ಟ್ರ ಸರ್ಕಾರದ ನೀತಿಯ ಪ್ರಕಾರ, ಜೀವ ಬೆದರಿಕೆ ಎದುರಿಸುತ್ತಿರುವ ನಾಗರಿಕರಿಗೆ ಭದ್ರತೆಯನ್ನು ಒದಗಿಸಲಾಗುತ್ತದೆ. ಸರ್ಕಾರ ಒದಗಿಸುವ ರಕ್ಷಣೆಗೆ ಭದ್ರತೆ ಪಡೆದವರು ಶುಲ್ಕವನ್ನು ಪಾವತಿಸಬೇಕು ಮತ್ತು ಭದ್ರತಾ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ.

ಇದನ್ನೂ ಓದಿ:ಭೂಗತ ಜಗತ್ತಿನ ಬೆದರಿಕೆ ಎದುರಿಸಿ ಮುನ್ನಡೆದ ಏಕೈಕ ನಟ ಶಾರುಖ್​ ಖಾನ್​: ನಿರ್ದೇಶಕ ಸಂಜಯ್​ ಗುಪ್ತಾ!

ABOUT THE AUTHOR

...view details