ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ ಸಿನಿಮಾ ಡಂಕಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ರಿಲೀಸ್ಗೆ ಇನ್ನೊಂದೇ ದಿನ ಬಾಕಿ. ಅಡ್ವಾನ್ಸ್ ಟಿಕೆಟ್ಗಳು ಶರವೇಗದಲ್ಲಿ ಮಾರಾಟವಾಗುತ್ತಿದೆ. ಪಂಜಾಬ್ನ ಜಲಂಧರ್‌ನಲ್ಲಿ ಅಭಿಮಾನಿಗಳು ಡೋಲು ವಾದ್ಯದೊಂದಿಗೆ ಬಂದು ಥಿಯೇಟರ್ನಲ್ಲಿ ಟಿಕೆಟ್ ಖರೀದಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಡಂಕಿ ಸಿನಿಮಾ ಸುತ್ತಲಿನ ಉತ್ಸಾಹ ಮುಗಿಲು ಮುಟ್ಟಿದೆ. ಕಿಂಗ್ ಖಾನ್ ಅಭಿಮಾನಿಗಳ ಕಾತರ ಜೋರಾಗಿದೆ. ಡಿಸೆಂಬರ್ 21 ರಂದು ಚಿತ್ರಮಂದಿಗಳಲ್ಲಿ ಬಿಡುಗಡೆಯಾಗುತ್ತಿದ್ದು, ಮುಂಗಡ ಟಿಕೆಟ್ ಬುಕಿಂಗ್ ಭರದಿಂದ ಸಾಗಿದೆ. ಪಂಜಾಬಿ ಹಿನ್ನೆಲೆಯನ್ನು ಆಧರಿಸಿದ ಹಿನ್ನೆಲೆ ಪಂಜಾಬಿ ಅಭಿಮಾನಿಗಳಿಂದ ಸಿನಿಮಾ ಸಾಕಷ್ಟು ಪ್ರೀತಿ ಗಳಿಸಿದೆ. ಇದೀಗ ಛಂಡೀಗಢದ ಅಭಿಮಾನಿಗಳು ಶಾರುಖ್ ಖಾನ್ ಅಭಿನಯದ ಡಂಕಿ ಚಿತ್ರಕ್ಕಾಗಿ ಜಲಂಧರ್‌ನಲ್ಲಿ ಮೊದಲ ದಿನದ ಮೊದಲ ಶೋ ವೀಕ್ಷಿಸಲು ಮುಂಗಡವಾಗಿ ಟಿಕೆಟ್ ಬುಕ್ ಮಾಡಲು ಡೋಲು ವಾದ್ಯದೊಂದಿಗೆ ಟ್ರ್ಯಾಕ್ಟರ್‌ಗಳಲ್ಲಿ ಆಗಮಿಸಿದ್ದಾರೆ.
ಬಾಲಿವುಡ್ ನಟ ಶಾರುಖ್ ಖಾನ್ ಅವರ ಫ್ಯಾನ್ ಕ್ಲಬ್ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ ನಲ್ಲಿ ಹಂಚಿಕೊಂಡಿದೆ. ಅಭಿಮಾನಿಗಳ ಉತ್ಸಾಹವನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು. ಅನೇಕ ಅಭಿಮಾನಿಗಳು ಪಂಜಾಬಿ ವೇಷಭೂಷಣದಲ್ಲಿದ್ದು, ಡೋಲು ಸದ್ದಿಗೆ ಭರ್ಜರಿಯಾಗಿ ನೃತ್ಯ ಮಾಡುತ್ತಿದ್ದಾರೆ. ಅನೇಕರು ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ನಂತರ, ಮೊದಲ ದಿನದ ಮೊದಲ ಶೋ ವೀಕ್ಷಿಸಲು ಚಿತ್ರಮಂದಿರದಲ್ಲಿ ಟಿಕೆಟ್ ಖರೀದಿಸುತ್ತಿರೋದನ್ನು ಈ ವೈರಲ್ ವಿಡಿಯೋದಲ್ಲಿ ಕಾಣಬಹುದು. ಜಲಂಧರ್‌ನ ಥಿಯೇಟರ್ ಹೊರಗೆ ಅಭಿಮಾನಿಗಳು ಸಂಭ್ರಮಾಚರಿಸುತ್ತಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಸಂಭ್ರಮಾಚರಿಸಿರುವ ಶಾರುಖ್ ಖಾನ್ ಅಭಿಮಾನಿಗಳು, ಚಿತ್ರ ತೆರೆಕಂಡ ಬಳಿಕ ಇನ್ನೆಷ್ಟು ಖುಷಿ ವ್ಯಕ್ತಪಡಿಸಲಿದ್ದಾರೆ ಎಂಬ ಕುತೂಹಲವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.