ಬಾಲಿವುಡ್ ಕಿಂಗ್ ಖಾನ್ ಶಾರುಖ್ ತಮ್ಮ ಕುಟುಂಬದೊಂದಿಗೆ ಸುಂದರ ಚಿತ್ರಗಳಿಗೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಕಿಂಗ್ ಖಾನ್ ಫ್ಯಾಮಿಲಿ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಸದ್ದು ಮಾಡುತ್ತಿದೆ. ಶಾರುಖ್ ಪತ್ನಿ, ಇಂಟೀರಿಯರ್ ಡಿಸೈನರ್ ಗೌರಿ ಖಾನ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಅಪರೂಪದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪತಿ ಶಾರುಖ್, ಮಕ್ಕಳಾದ ಆರ್ಯನ್ ಖಾನ್, ಸುಹಾನಾ ಖಾನ್ ಮತ್ತು ಅಬ್ರಾಮ್ ಖಾನ್ ಒಳಗೊಂಡಿರುವ ಚಿತ್ರಗಳೀಗ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿದೆ. ಅದ್ಧೂರಿ ಒಳಾಂಗಣದಲ್ಲಿ ಸೆರೆಹಿಡಿಯಲಾದ ಚಿತ್ರಗಳಲ್ಲಿ, ಖಾನ್ ಕುಟುಂಬಸ್ಥರು ಬ್ಲ್ಯಾಕ್ ಅಂಡ್ ವೈಟ್ ಡ್ರೆಸ್ ಧರಿಸಿದ್ದಾರೆ.
ಗೌರಿ ಖಾನ್ ಹಂಚಿಕೊಂಡಿರುವ ಚಿತ್ರವೂ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಕೆಲ ಫೋಟೋಗಳು ಸದ್ದು ಮಾಡುತ್ತಿವೆ. ಶಾರುಖ್ ಫ್ಯಾನ್ ಕ್ಲಬ್ ಕೂಡ ಹಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದೆ. ಅದರಲ್ಲಿ ಬಿಳಿ ಮತ್ತು ನೀಲಿ ಬಟ್ಟೆಗಳನ್ನು ಧರಿಸಿದ್ದು, ಕ್ಯಾಂಡಿಡ್ ಚಿತ್ರಗಳಲ್ಲಿ ಖಾನ್ ಕುಟುಂಬಸ್ಥರು ನಗುತ್ತಿರುವುದನ್ನು ಕಾಣಬಹುದು. ಸುಹಾನಾ ಮತ್ತು ಆರ್ಯನ್ ಅವರು ಪುಟ್ಟ ತಮ್ಮ ಅಬ್ರಾಹಂ ನನ್ನು ನೋಡುತ್ತಿರುವಾಗ, ಗೌರಿ, ಶಾರುಖ್ ಮತ್ತು ಅಬ್ರಾಮ್ ಕ್ಯಾಮರಾವನ್ನು ನೋಡುತ್ತಿದ್ದರು. ಮತ್ತೊಂದು ಫೋಟೋಶೂಟ್ನಲ್ಲಿ ಇಡೀ ಕುಟುಂಬ ಕ್ಯಾಮರಾ ಕಣ್ಣೊಳಗೆ ಸೆರೆ ಆಗಿದೆ. ಶಾರುಖ್, ಆರ್ಯನ್ ಮತ್ತು ಅಬ್ರಾಹಂ ಬ್ಲ್ಯಾಕ್ ಲೆದರ್ ಜಾಕೆಟ್ ಧರಿಸಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರಗಳ ಮೇಲೆ, ಅಭಿಮಾನಿಯೊಬ್ಬರು "ಫ್ಯಾಮಿಲಿ ವೈಬ್" ಎಂದು ಬರೆದಿದ್ದಾರೆ. ಮತ್ತೊಬ್ಬರು ಶಾರುಖ್ ಅವರ ಇತ್ತೀಚಿನ ಚಿತ್ರ ಪಠಾಣ್ ಅನ್ನು ಉಲ್ಲೇಖಿಸಿ "ನಮ್ಮ ಪಠಾಣ್ ಕುಟುಂಬ" ಎಂದು ಬರೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮತ್ತೊಂದು ಚಿತ್ರ ಕೂಡ ಸಾಕಷ್ಟು ಸದ್ದು ಮಾಡಿದೆ. ಶಾರುಖ್ ಮತ್ತು ಹಿರಿಯ ಪುತ್ರ ಆರ್ಯನ್ ಗ್ರೀನ್ ಜಾಕೆಟ್ ಧರಿಸಿ ಕ್ಯಾಮರಾ ಕಣ್ಣೊಳಗೆ ಸೆರೆಯಾಗಿದ್ದಾರೆ. ಇವರನ್ನು ನೋಡಿದ್ರೆ ತಂದೆ ಮಗ ಅಂತಾ ಹೇಳೋದು ಬಹಳ ಕಷ್ಟ. ಶಾರುಖ್ ಖಾನ್ ಈ ವಯಸ್ಸಿನಲ್ಲಿ ಸಖತ್ ಎನರ್ಜಿಟಿಕ್ ಆಗಿದ್ದು, ಆರ್ಯನ್ ಸಹೋದರನಂತೆ ಕಾಣುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಫ್ಯಾನ್ಸ್ ಪೇಜ್ನಲ್ಲಿ ಪೋಸ್ಟ್ ಮಾಡಿದ ಈ ಫೋಟೋಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು "ರಾಜ ಮತ್ತು ರಾಜಕುಮಾರ" ಎಂದು ಕಮೆಂಟ್ ಮಾಡಿದ್ದಾರೆ. 'ಅಪ್ಪ ಮಗನ ಫೋಟೋ ಅದ್ಭುತವಾಗಿದೆ' ಎಂದು ಮತ್ತೊಬ್ಬರು ಹೇಳಿದ್ದಾರೆ. ಇನ್ನೋರ್ವ ಸಾಮಾಜಿಕ ಜಾಲತಾಣ ಬಳಕೆದಾರರು "ಜೆರಾಕ್ಸ್ ಕಾಪಿ" ಎಂದು ಕಾಮೆಂಟ್ ಮಾಡಿದ್ದಾರೆ.