ಮುಂಬೈ(ಮಹಾರಾಷ್ಟ್ರ): ದುಬಾರಿ ವಾಚುಗಳಿಗೆ ಸುಂಕ ಕಟ್ಟದ ಕಾರಣಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ತಡೆದು ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಸುಮಾರು 7 ಲಕ್ಷ ರೂಪಾಯಿ ದಂಡ ಕಟ್ಟಿಸಿಕೊಂಡು ಬಿಟ್ಟಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಮುಂಬೈ ಏರ್ಪೋರ್ಟ್ನಲ್ಲಿ ಅಧಿಕಾರಿಗಳು ತಡೆದದ್ದು ಶಾರುಖ್ ಖಾನ್ ಅವರನ್ನಲ್ಲ, ಬದಲಿಗೆ ಅವರ ಅಂಗರಕ್ಷಕ ರವಿ ಸಿಂಗ್ ಅವರನ್ನು ಎಂದು ತಿಳಿದುಬಂದಿದೆ.
ಕಸ್ಟಮ್ಸ್ ಇಲಾಖೆಯ ಏರ್ ಇಂಟೆಲಿಜೆನ್ಸ್ ಯುನಿಟ್ (ಎಐಯು) ಅಧಿಕಾರಿಗಳು ಕಸ್ಟಮ್ಸ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಖಾನ್ ಅವರ ಬಾಡಿ ಗಾರ್ಡ್ ರವಿ ಸಿಂಗ್ ಅವರನ್ನು ತಡೆದು ವಿಚಾರಣೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶಾರುಖ್ ಖಾನ್ ತಮ್ಮ ತಂಡದೊಂದಿಗೆ ದುಬೈನಿಂದ ಶುಕ್ರವಾರ ರಾತ್ರಿ ಮುಂಬೈಗೆ ಮರಳಿದ್ದರು. ಆ ವೇಳೆ, ಅಂಗರಕ್ಷಕ ಕಸ್ಟಮ್ಸ್ ಸುಂಕ ತುಂಬಿದ್ದಾರೆ. ಇದಾದ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ.
ಶಾರುಖ್ ಖಾನ್ ಮತ್ತು ಅವರ ಮ್ಯಾನೇಜರ್ ಪೂಜಾ ದದ್ಲಾನಿ ದುಬೈನಿಂದ ಮರಳಿದ ಕೂಡಲೇ ಮುಂಬೈ ವಿಮಾನ ನಿಲ್ದಾಣ ತೊರೆದಿದ್ದರು. ಅವರನ್ನು ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸಿಲ್ಲ. ಕೇವಲ ತಮ್ಮ ವಸ್ತುಗಳಿಗೆ ಸುಂಕ ಕಟ್ಟಿಸಿಕೊಂಡು ಕಳುಹಿಸಿಕೊಟ್ಟಿದ್ದಾರೆ. ಯಾವುದೇ ದಂಡ ವಿಧಿಸಿಲ್ಲ ಎಂದು ಇಲಾಖೆ ತಿಳಿಸಿದೆ.