ಭಾರತೀಯ ಚಿತ್ರರಂಗದ ಪ್ರಸಿದ್ಧ ನಟ ಶಾರುಖ್ ಖಾನ್ ಬರ್ತ್‌ಡೇ ಸೆಲೆಬ್ರೇಶನ್ಗೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 2ರಂದು 58ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಕಿಂಗ್ ಖಾನ್ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಸಜ್ಜಾಗಿದ್ದಾರೆ. ನಾಲ್ಕು ವರ್ಷಗಳ ಬ್ರೇಕ್ ಬಳಿಕ 'ಪಠಾಣ್' ಮತ್ತು 'ಜವಾನ್'ನಂತಹ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿರುವ ಶಾರುಖ್ ಖಾನ್ ನವೆಂಬರ್ 2ರಂದು ಅದ್ಧೂರಿಯಾಗಿ ಹುಟ್ಟುಹಬ್ಬ ಆಯೋಜಿಸಲು ಯೋಜಿಸುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳೂ ಕೂಡಾ ತಮ್ಮ ಮೆಚ್ಚಿನ ನಟನ ಬರ್ತ್‌ಡೇ ಸೆಲೆಬ್ರೇಟ್ ಮಾಡಲು ಉತ್ಸುಕರಾಗಿದ್ದಾರೆ. ಹಲವು ಅಭಿಮಾನಿ ಸಂಘಗಳು ತಮ್ಮ ಮೆಚ್ಚಿನ ನಟನ ಜನ್ಮದಿನವನ್ನು ವಿಶೇಷವಾಗಿಸಲು ಕಂಬಳಿ ದಾನ, ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವುದು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವಂಥ ಹಲವು ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳುತ್ತಿವೆ.
ಶಾರುಖ್ ಖಾನ್ ಅವರಿಗೆ ಈ ಜನ್ಮದಿನಾಚರಣೆ ಬಹಳ ವಿಶೇಷವಾಗಿದೆ. ಕೆಲವು ಬದ್ಧತೆಗಳು, ಕೋವಿಡ್ ಹಿನ್ನೆಲೆಯಿಂದಾಗಿ ಸಿನಿಮಾಗಳಿಂದ ಬ್ರೇಕ್ ಪಡೆದಿದ್ದರು. ನಾಲ್ಕು ವರ್ಷಗಳ ಬಳಿಕ 'ಪಠಾಣ್' ಸಿನಿಮಾ ಮೂಲಕ ಬಂದ ಕಿಂಗ್ ಖಾನ್, ಭರ್ಜರಿ ಯಶಸ್ಸು ಗಳಿಸಿದರು. ಕಳೆದ ತಿಂಗಳು ತೆರೆಕಂಡ 'ಜವಾನ್' ಕೂಡ ಸೂಪರ್‌ಹಿಟ್ ಆಗಿ ಒಂದು ಸಾವಿರ ಕೋಟಿ ರೂ. ಕ್ಲಬ್ ಸೇರಿದೆ. ಇದೇ ಸಾಲಿನಲ್ಲಿ ತೆರೆಕಾಣಲು 'ಡಂಕಿ' ಸಿನಿಮಾ ಸಿದ್ಧವಾಗಿದೆ. ಹೀಗಾಗಿ 2023 ಎಸ್ಆರ್ಕೆ ಅವರಿಗೆ ವಿಶೇಷ. ಹಾಗಾಗಿ ತಮ್ಮ 58ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ರೆಡಿಯಾಗಿದ್ದಾರೆ. ಜನ್ಮದಿನಾಚರಣೆಗೆ ಭಾರತೀಯ ಚಿತ್ರರಂಗದ ಖ್ಯಾತನಾಮರನ್ನು ಆಹ್ವಾನಿಸಲು ನಿರ್ಧರಿಸಿದ್ದಾರೆ.