ಕನ್ನಡ ಕಿರುತೆರೆ ಹಾಗು ಸಿನಿಮಾ ನಿರ್ದೇಶಕ ಕೆ.ಎನ್.ಮೋಹನ್ ಕುಮಾರ್ ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 56 ವರ್ಷದ ಮೋಹನ್, ಪ್ರಖ್ಯಾತ ನಟಿ ಹಾಗು ನಿರೂಪಕಿ ವತ್ಸಲಾ ಮೋಹನ್ ಅವರ ಪತಿ.
ಎನ್.ಆರ್.ಕಾಲೋನಿಯ ರಾಮಲೀಲಾ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಮೋಹನ್ ನಿನ್ನೆ ಬಾತ್ ರೂಮ್ಗೆಂದು ಹೋದವರು ಹಠಾತ್ತಾಗಿ ಕುಸಿದು ಬಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ತಾಯಿ ಮಾತ್ರ ಇದ್ದರು ಎಂದು ತಿಳಿದುಬಂದಿದೆ. ಮೋಹನ್ ದಶಕಗಳಿಂದ ದೂರದರ್ಶನ, ಸಿನಿಮಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸಿನಿಮಾ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದರು.
ಇದನ್ನೂ ಓದಿ:ಉಜಿರೆ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ವಿಧಿವಶ
ಪತ್ನಿ ವತ್ಸಲಾ ರಚಿಸಿದ ಸಜ್ಜಾದನಾ ಗಣೇಶ ಕೃತಿಯಾಧರಿಸಿ ಬೊಂಬೆಯಾಟ ಎನ್ನುವ ಸಿನಿಮಾ ಮಾಡಿದ್ದರು. 90 ನಿಮಿಷಗಳ ಈ ಸಿನಿಮಾ 2016ರಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಗಳಿಸಿದೆ. ಮೋಹನ್ ಇಂಜಿನಿಯರಿಂಗ್ ಪದವೀಧರ. ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗದ ಆಕರ್ಷಣೆಗೂ ಒಳಗಾಗಿದ್ದರು.
ಕೆ.ಎನ್.ಮೋಹನ್ ಮತ್ತು ಪತ್ನಿ ವತ್ಸಲಾ ನಿರ್ದೇಶಕನಾಗಿಯೂ ತಮ್ಮ ಪ್ರತಿಭೆ ತೋರಿಸಿದ್ದ ಮೋಹನ್, ರಂಗ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾಗಲೇ ವತ್ಸಲಾರ ಪರಿಚಯವಾಗಿ ಮದುವೆ ಮಾಡಿಕೊಂಡರು. ಆ ನಂತರದ ದಿನಗಳಲ್ಲಿ ಕಿರುತೆರೆ ನಿರ್ದೇಶಕ ಹಾಗು ವನ್ಯಜೀವಿ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದಾರೆ. ಪತ್ನಿ ವತ್ಸಲ ಹಾಗು ಮಗಳು ಅನನ್ಯ ಅವರನ್ನು ಮೃತರು ಅಗಲಿದ್ದಾರೆ. ನಿರ್ದೇಶಕ ಟಿ.ಎನ್.ಸೀತಾರಾಮ್ ಸೇರಿದಂತೆ ಸಾಕಷ್ಟು ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.