ಈಗಾಗಲೇ ಕೆಲ ಕಿರುತೆರೆ ಕಲಾವಿದರು ಸಿಲ್ವರ್ ಸ್ಕ್ರೀನ್ ಮೇಲೆ ಮೋಡಿ ಮಾಡಿ ಯಶಸ್ಸು ಕಂಡಿದ್ದಾರೆ. ಈ ಸಾಲಿಗೆ ಈಗ ದೊಡ್ಮನೆ ಸೊಸೆ, ಗಟ್ಟಿಮೇಳ ಧಾರಾವಾಹಿ ಮೂಲಕ ಗಮನ ಸೆಳೆದಿರುವ ನಟಿ ಗಗನ ಕುಂಚಿ ಎಂಟ್ರಿ ಕೊಡಲು ರೆಡಿ ಆಗಿದ್ದಾರೆ. ಸ್ಮಾಲ್ ಸ್ಕ್ರೀನ್ನಲ್ಲಿ ಸಕ್ಸಸ್ ಕಂಡಿರುವ ಗಗನ ಕುಂಚಿ ಇದೀಗ ಬಿಗ್ ಸ್ಕ್ರೀನ್ನಲ್ಲಿ ಮೋಡಿ ಮಾಡಲು ರೆಡಿಯಾಗಿದ್ದಾರೆ. ಎರಡು ಚಿತ್ರಗಳಲ್ಲಿ ಗಗನ ಕುಂಚಿ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಆ ಎರಡೂ ಚಿತ್ರಗಳು ಶೀಘ್ರದಲ್ಲೇ ಸೆಟ್ಟೇರಲಿದೆ.
ಎರಡು ಭಾಗಗಳಲ್ಲಿ ಬರಲಿದೆ ಎರಡೂ ಸಿನಿಮಾಗಳು: ಗಗನ ಕುಂಚಿ ನಾಯಕಿಯಾಗಿ ನಟಿಸುತ್ತಿರುವ ಎರಡು ಚಿತ್ರಗಳು ಸಹ ಸುಗಮ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಲಿದೆ. ಪ್ರೊಡಕ್ಷನ್ ನಂ ೧ (ಶೀರ್ಷಿಕೆ ಇಡಬೇಕಿದೆ) ಚಿತ್ರವನ್ನು ಗುರುಕುಮಾರ್ ಪಿ ನಿರ್ದೇಶಿಸಲಿದ್ದಾರೆ. ತೆಲುಗಿನ ವಾಲ್ಟೇರ್ ವೀರಯ್ಯ ಹಾಗೂ ವೆಂಕಿಮಾಮ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಗುರುಕುಮಾರ್ ಕಾರ್ಯ ನಿರ್ವಹಿಸಿದ್ದಾರೆ. ಎರಡನೇ ಚಿತ್ರವನ್ನು (ಪ್ರೊಡಕ್ಷನ್ ನಂ ೨) ವಿಜಯ್ ಆರ್ ನಿರ್ದೇಶಿಸಲಿದ್ದಾರೆ. ಕಥಾರ್ ಭಾಷಾ ಎಂದ್ರಾ ಮುತ್ತು ರಾಮಲಿಂಗಂ, ಮಾವೀರನ್, ವಿರುಮನ್, ಆಕ್ಷನ್, ಜೈ ಭೀಮ್ ಸೇರಿದಂತೆ ಮುಂತಾದ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಗುರುಕುಮಾರ್ ಹಾಗೂ ವಿಜಯ್ ಇಬ್ಬರಿಗೂ ಇದು ಚೊಚ್ಚಲ ಚಿತ್ರ (ಸಂಪೂರ್ಣ ಪ್ರಮಾಣದ ನಿರ್ದೇಶಕರಾಗಿ). ಎರಡು ಚಿತ್ರಗಳೂ ಕೂಡ ಎರಡು ಭಾಗಗಳಲ್ಲಿ ಬರುತ್ತಿರುವುದು ವಿಶೇಷ.
ಗಗನ ಕುಂಚಿ ಬಾಲನಟಿಯಾಗಿ ಅಭಿನಯ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಕಾಲಚಕ್ರ ಎಂಬ ಧಾರಾವಾಹಿಯಲ್ಲಿ ನಟಿಸಿದ ಅವರು, ಅದರ ಮರು ವರ್ಷವೇ ರಮೇಶ್ ಅರವಿಂದ್ ಅಭಿನಯದ ಹೆಂಡ್ತೀರ ದರ್ಬಾರ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದರು. ಆ ನಂತರ ತಮಿಳಿನ ಸುಬ್ರಹ್ಮಣ್ಯಪುರಂ, ಕನ್ನಡದ ಮಹಾದೇವಿ, ಗಟ್ಟಿಮೇಳ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದರು. ಮಾಡೆಲಿಂಗ್‍ನಲ್ಲೂ ಗುರುತಿಸಿಕೊಂಡಿರುವ ಇವರು, ಮಿಸ್ ಕರ್ನಾಟಕ ಇಂಟರ್ ನ್ಯಾಷನಲ್ ಸ್ಪರ್ಧೆಯ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಜೊತೆಗೆ ಕಾಲೇಜ್ ವಿದ್ಯಾಭ್ಯಾಸದ ವೇಳೆ ಬೆಂಗಳೂರು ಟೈಮ್ಸ್ ಫ್ರೆಶ್ ಫೇಸ್ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.