ಕರ್ನಾಟಕ

karnataka

ETV Bharat / entertainment

ಮಗಳು ಜಾನಕಿ ಖ್ಯಾತಿಯ ನಟ ಮಂಡ್ಯ ರವಿ ನಿಧನ - etv bharat kannada

ಪೋಷಕ ಪಾತ್ರಗಳಿಂದ ಗುರುತಿಸಿಕೊಂಡಿದ್ದ ನಟ ಮಂಡ್ಯ ರವಿ ನಿಧನ ಹೊಂದಿದ್ದಾರೆ. ರವಿ ಅವರು ಬಾಲ್ಯದಿಂದಲೇ ನಾಟಕಗಳಲ್ಲಿ ಅಭಿನಯಿಸುತ್ತ, ನಂತರ ಬಣ್ಣದ ಲೋಕದತ್ತ ಒಲವು ಬೆಳೆಸಿಕೊಂಡಿದ್ದರು.

serial-actor-mandya-ravi-passes-away
ಮಗಳು ಜಾನಕಿ ಖ್ಯಾತಿಯ ನಟ ಮಂಡ್ಯ ರವಿ ನಿಧನ

By

Published : Sep 14, 2022, 7:42 PM IST

Updated : Sep 14, 2022, 10:02 PM IST

ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಿಂದ ಗುರುತಿಸಿಕೊಂಡಿದ್ದ ಮಂಡ್ಯ ರವಿ (43) ಬುಧವಾರ ಸಂಜೆ ನಿಧನರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಂಜೆ 6.45ಕ್ಕೆ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ರವಿ ಪೂರ್ಣ ಹೆಸರು ರವಿ ಪ್ರಸಾದ್ ಎಂ. ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸುತ್ತಲೇ ಮಂಡ್ಯ ರವಿ ಆಗಿ ಫೇಮಸ್ ಆಗಿದ್ದರು. ರವಿ ಅವರು ತಂದೆ ಕನ್ನಡ ಪ್ರಾಧ್ಯಾಪಕರು, ಸಾಹಿತಿಗಳಾದ ಹೆಚ್.ಎಸ್. ಮುದ್ದೇಗೌಡ, ತಾಯಿ ಪಾಪಚ್ಚಿ, ಇಬ್ಬರು ಸಹೋದರಿಯರು, ಪತ್ನಿ ಮತ್ತು ಮಗ ಸೇರಿದಂತೆ ಅಪಾರ ಗೆಳೆಯರ ಬಳಗ, ಹಿತೈಷಿಗಳನ್ನು ಆಗಲಿದ್ದಾರೆ.

ರವಿ ಬಾಲ್ಯದಿಂದಲೇ ನಾಟಕಗಳಲ್ಲಿ ಅಭಿನಯಿಸುತ್ತ, ನಂತರ ಬಣ್ಣದ ಲೋಕದತ್ತ ಒಲವು ಬೆಳೆಸಿಕೊಂಡಿದ್ದರು. ಓದಿದ್ದು ಎಂಎ ಇಂಗ್ಲಿಷ್ ಮತ್ತು ಎಲ್‍ಎಲ್‍ಬಿ ಆದರೂ, ಆಯ್ಕೆ ಮಾಡಿಕೊಂಡ ವೃತ್ತಿ ಮಾತ್ರ ನಟನೆ. 1996ರಲ್ಲಿ ಜನದನಿ ಹವ್ಯಾಸಿ ನಾಟಕ ತಂಡ ಸೇರಿ, ಅಲ್ಲಿಂದ ಟಿ.ಎಸ್. ನಾಗಾಭರಣ ನಿರ್ದೇಶನದ ಮಹಾಮಾಯಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಜಗತ್ತಿಗೆ ಕಾಲಿಟ್ಟರು.

ನಟ ಮಂಡ್ಯ ರವಿ

ಅದರಲ್ಲಿ ಟಿ.ಎನ್‌ ಸೀತಾರಾಮ್‌ ನಿರ್ದೇಶನದ ಮಗಳು ಜಾನಕಿ ಧಾರಾವಾಹಿಯಿಂದ ಹೆಚ್ಚು ಪ್ರಖ್ಯಾತಿ ಹೊಂದಿದರು. 50ಕ್ಕೂ ಹೆಚ್ಚು ಧಾರಾವಾಹಿಗಳು, ಪಟಾಕಿ, ಘಜಲ್,‌ ಪೆಪ್ಪೆ ಸಿನಿಮಾ ಸೇರಿದಂತೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಂಡ್ಯ ರವಿ ಅಭಿನಯಿಸಿದ್ದಾರೆ.

ಅವರ ನಿಧನಕ್ಕೆ ರಂಗಭೂಮಿ ಕಲಾವಿದರು, ಸ್ನೇಹಿತರು ಮತ್ತು ಕಿರುತೆರೆ ನಟರು ಕಂಬನಿ ಮಿಡಿದಿದ್ದಾರೆ. ಗುರುವಾರ ಮಂಡ್ಯದಲ್ಲಿನ ನಾಲ್ವಡಿ ಕೃಷ್ಣರಾಜ ಒಡೆಯರ ಬಡಾವಣೆಯಲ್ಲಿರುವ ಎಚ್.ಎಸ್.ಮುದ್ದೇಗೌಡರ ಮನೆಯಲ್ಲಿ ರವಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಮಧ್ಯಾಹ್ನ ಕಲ್ಲಹಳ್ಳಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಚಿತ್ರರಂಗದಲ್ಲಿ 30 ವರ್ಷದ ಸಾಧನೆ - ನಟ ರಮೇಶ್ ಅರವಿಂದ್​ಗೆ ಗೌರವ ಡಾಕ್ಟರೇಟ್

Last Updated : Sep 14, 2022, 10:02 PM IST

ABOUT THE AUTHOR

...view details