ಹೈದರಾಬಾದ್:'ಅಮೃತವರ್ಷಿಣಿ' ಸಿನಿಮಾ ಖ್ಯಾತಿಯ ಬಹುಭಾಷಾ ನಟ ಶರತ್ಬಾಬು(71) ದೀರ್ಘಕಾಲದ ಅನಾರೋಗ್ಯದಿಂದ ಹೈದರಾಬಾದ್ನಲ್ಲಿ ಇಂದು(ಮೇ 22 ರಂದು) ಇಹಲೋಕ ತ್ಯಜಿಸಿದ್ದಾರೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳಾದ ತಮಿಳು, ತೆಲುಗು, ಮಲಯಾಳಂ ಕನ್ನಡದಲ್ಲಿ 250 ಕ್ಕೂ ಅಧಿಕ ಸಿನಿಮಾಗಳಲ್ಲಿ ಇವರು ಪಾತ್ರ ಪೋಷಣೆ ಮಾಡಿದ್ದಾರೆ. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ದೀರ್ಘಕಾಲದಿಂದ ಅನಾರೋಗ್ಯಕ್ಕೀಡಾಗಿದ್ದ ಶರತ್ಬಾಬು ಅವರಿಗೆ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಇಂದು ಅವರು ಚಿಕಿತ್ಸೆ ಫಲಿಸದೇ ನಿಧನ ಹೊಂದಿದ್ದಾರೆ.
1973 ರಲ್ಲಿ ತೆರೆಕಂಡ ‘ರಾಮ ರಾಜ್ಯಂ’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದ ಶರತ್ ಬಾಬು ತೆಲುಗು, ತಮಿಳು ಚಿತ್ರರಂಗದಲ್ಲಿ ಬಹು ಜನಪ್ರಿಯ ನಟರಾಗಿದ್ದವರು. ಸಿನಿಮಾ ನಾಯಕನಾಗಿ, ಎರಡನೇ ನಾಯಕನಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದು ಸಮಯದಲ್ಲಿ ಸ್ಟಾರ್ ಆಗಿ ಸಹ ಮೆರೆದಿದ್ದರು. ಸೂಪರ್ಸ್ಟಾರ್ ರಜಿನಿಕಾಂತ್ ಜೊತೆಗೆ ಮುತ್ತು, ಅರುಣಾಚಲಂ ಸೇರಿದಂತೆ ಹತ್ತು ಹಲವಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ತಮ್ಮ 40 ವರ್ಷದ ಸಿನಿ ಬದುಕಿನಲ್ಲಿ ಸುಮಾರು 250 ಕ್ಕೂ ಹೆಚ್ಚು ಪಾತ್ರಗಳಲ್ಲಿ ಶರತ್ ಬಾಬು ನಟಿಸಿದ್ದಾರೆ ಎಂಬುದು ವಿಶೇಷ.
ಕನ್ನಡದಲ್ಲಿ ಶರತ್ ಹೆಜ್ಜೆಗಳು:ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟ ಶರತ್ಬಾಬು ಅವರು ಕನ್ನಡದ ಹಲವು ಸಿನಿಮಾಗಳಲ್ಲಿ ಪಾತ್ರಕ್ಕೆ ಜೀವ ತುಂಬಿದ್ದರು. ಅಮೃತವರ್ಷಿಣಿ ಅವರ ಸೂಪರ್ಹಿಟ್ ಸಿನಿಮಾ. ಇದಲ್ಲದೇ, ತುಳಸಿದಳ, ರಣಚಂಡಿ, ಶಕ್ತಿ, ಕಂಪನ, ಗಾಯ, ಹೃದಯ- ಹೃದಯ, ನೀಲ, ನಮ್ಮೆಜಮಾನ್ರು ಸಿನಿಮಾಗಳಲ್ಲಿ ಅವರು ಪಾತ್ರ ನಿರ್ವಹಿಸಿ ಕನ್ನಡ ಸಿನಿ ಪ್ರೇಮಿಗಳನ್ನು ರಂಜಿಸಿದ್ದಾರೆ. ಇಷ್ಟು ಮಾತ್ರವಲ್ಲದೇ, ಕನ್ನಡದ ಕೆಲ ಧಾರಾವಾಹಿಗಳಲ್ಲಿಯೂ ಅವರು ತಮ್ಮ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ.