ದೇಶದ ಎರಡು ರಾಜ್ಯಗಳಲ್ಲಿ "ದಿ ಕೇರಳ ಸ್ಟೋರಿ" ನಿಷೇಧವನ್ನು ಪ್ರಶ್ನಿಸಿ ಚಲನಚಿತ್ರ ನಿರ್ಮಾಪಕರು ಸಲ್ಲಿಸಿದ್ದ ಮನವಿಗೆ ಸುಪ್ರೀಂ ಕೋರ್ಟ್ ಇಂದು ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸರ್ಕಾರಗಳಿಂದ ಉತ್ತರವನ್ನು ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್ ನರಸಿಂಹ ಅವರ ಪೀಠವು ಸಿನಿಮಾ ಬ್ಯಾನ್ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರಶ್ನಿಸಿದೆ. ಯಾವುದೇ ಸಮಸ್ಯೆಯಿಲ್ಲದೇ ದೇಶದ ಉಳಿದ ಭಾಗಗಳಲ್ಲಿ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ ಮತ್ತು ನಿಷೇಧಕ್ಕೆ ಯಾವುದೇ ಕಾರಣವಿಲ್ಲ ಎಂದು ತೋರುತ್ತಿದೆ. ಸರಿಸುಮಾರು ನಿಮ್ಮ ರಾಜ್ಯದಲ್ಲಿರುವಷ್ಟೇ ಜನಸಂಖ್ಯೆ ಹೊಂದಿರುವ ಕೆಲ ರಾಜ್ಯಗಳು ಸೇರಿದಂತೆ ದೇಶದ ಇತರೆ ಭಾಗಗಳಲ್ಲಿ ಚಲನಚಿತ್ರವು ಓಡುತ್ತಿದೆ. ಅಲ್ಲಿ ಏನೂ ಆಗಿಲ್ಲ. ಜನರು ಚಲನಚಿತ್ರವನ್ನು ಇಷ್ಟಪಡದಿದ್ದರೆ, ಅವರು ಚಲನಚಿತ್ರವನ್ನು ನೋಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರಿಗೆ ಪೀಠ ಹೇಳಿದೆ.
ಗುಪ್ತಚರ ಮಾಹಿತಿಯ ಪ್ರಕಾರ, ಕಾನೂನು ಮತ್ತು ಸುವ್ಯವಸ್ಥೆಗೆ ಸಮಸ್ಯೆ ಆಗಬಹುದು ಮತ್ತು ವಿವಿಧ ಸಮುದಾಯಗಳ ನಡುವೆ ಶಾಂತಿ ಉಲ್ಲಂಘನೆ ಆಗುವ ಸಾಧ್ಯತೆಗಳಿವೆ ಎಂದು ವಕೀಲ ಅಭಿಷೇಕ್ ಸಿಂಘ್ವಿ ಹೇಳಿದರು.
"ದಿ ಕೇರಳ ಸ್ಟೋರಿ" ಪ್ರದರ್ಶನಗೊಳ್ಳುತ್ತಿರುವ ಥಿಯೇಟರ್‌ಗಳಿಗೆ ಸೂಕ್ತ ಭದ್ರತೆ ಒದಗಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಪೀಠವು ತಮಿಳುನಾಡು ಸರ್ಕಾರವನ್ನು ಕೇಳಿದೆ. ರಾಜ್ಯದಲ್ಲಿ ಭದ್ರತೆ ಒದಗಿಸುವ ಮೂಲಕ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಬೇರೆ ರಾಜ್ಯಗಳಲ್ಲಿ ಚಿತ್ರಕ್ಕೆ ವಿರೋಧವಿಲ್ಲ ಎಂದಾಗ, ನಿಮ್ಮ ಆಕ್ಷೇಪಣೆ ಏನು ಎಂದು ನ್ಯಾಯಾಲಯ ಪ್ರಶ್ನಿಸಿದೆ.