ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಚಿತ್ರಗಳ ಜೊತೆಗೆ ಅದ್ಧೂರಿ ಮೇಕಿಂಗ್ ಸಿನಿಮಾಗಳು ಮೂಡಿ ಬರುತ್ತಿದ್ದು, ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹ ನಟನ ಪಾತ್ರಗಳನ್ನು ಮಾಡುತ್ತಾ ಇತ್ತೀಚಿನ ವರ್ಷಗಳಲ್ಲಿ ನಟನಾಗಿ ಹಾಗೂ ನಿರ್ದೇಶಕನಾಗಿ ಗಮನ ಸೆಳೆದವರು ಯತಿರಾಜ್. ಪೂರ್ಣಸತ್ಯ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದ ಯತಿರಾಜ್ ಸಂಜು ಸಿನಿಮಾ ಸೇರಿದಂತೆ 5 ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಂಜು ಹಾಗೂ ಬೊಂಬೆ ಹೇಳುತೈತೆ ಚಿತ್ರಗಳು ಬಿಡುಗಡೆಗೆ ರೆಡಿಯಾಗಿರುವ ಈ ಸಂದರ್ಭದಲ್ಲಿ ನಿರ್ದೇಶಕ ಯತಿರಾಜ್ ಮತ್ತೊಂದು ಹೊಸ ಸಿನಿಮಾ ಡೈರೆಕ್ಷನ್ ಮಾಡಲು ಸಜ್ಜಾಗಿದ್ದಾರೆ.
ಈ ಚಿತ್ರಕ್ಕೆ ಸತ್ಯಂ ಶಿವಂ ಅಂತಾ ಟೈಟಲ್ ಫಿಕ್ಸ್ ಆಗಿದ್ದು, ಸುಪಾರಿ ಕಿಲ್ಲರ್ ಕಥಾಹಂದರ ಕಥೆಯನ್ನು ಹೇಳಲು ಹೊರಟ್ಟಿದ್ದಾರೆ. ಈ ಹಿಂದೆ ಭಿಕ್ಷುಕ ಎಂಬ ಚಿತ್ರವನ್ನು ನಿರ್ಮಿಸಿದ್ದ ಬುಲೆಟ್ ರಾಜು ಅವರು ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದರೊಂದಿಗೆ ನಿರ್ಮಾಣದ ಹೊಣೆಯೂ ಇವರ ಮೇಲಿದೆ.
ಈ ಸಿನಿಮಾ ಬಗ್ಗೆ ಮಾತನಾಡಿರೋ ನಿರ್ದೇಶಕ ಯತಿರಾಜ್, ಕೊರೊನಾ ಸೋಂಕು ಬಹುತೇಕ ಜನರ ಜೀವನ ಬದಲಿಸಿದೆ. ನಾನು ಆಗ ಶಾರ್ಟ್ ಫಿಲಂ ನಿರ್ದೇಶನ ಆರಂಭಿಸಿ, 15ಕ್ಕೂ ಹೆಚ್ಚು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೆ. ಇನ್ನೂ ಈ ಚಿತ್ರದ ಬಗ್ಗೆ ಹೇಳಬೇಕೆಂದರೆ, "ಸತ್ಯಂ ಶಿವಂ" ಎರಡು ಪಾತ್ರಗಳ ಹೆಸರಲ್ಲ, ನಾಯಕನಿಗೆ ಸತ್ಯದ ದರ್ಶನ ಮಾಡಿಸುವ ಪಕ್ಕಾ ಮಾಸ್ ಸಿನಿಮಾ. ರೌಡಿಸಂ, ಬ್ಲಡ್ ಎಲ್ಲವೂ ಇದರಲ್ಲಿದೆ. ಇದು ಒಬ್ಬ ಸುಪಾರಿ ಕಿಲ್ಲರ್ ಕಥೆ. ಆತ ಹಣಕ್ಕೋಸ್ಕರ ಏನು ಬೇಕಾದರೂ ಮಾಡುವವ, ಯಾವ ಮಟ್ಟಕ್ಕೆ ಬೇಕಾದರೂ ಹೋಗುವವನು. ಆತನ ಕಥೆ ಹೇಳಲಿದೆ ಈ ಸಿನಿಮಾ. ಚಿತ್ರದಲ್ಲಿ ಸಂಗೀತಾ, ವೀಣಾ ಸುಂದರ್ ಅಲ್ಲದೇ ನಾನು ವಿಜಯ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ ಪತ್ನಿಯ ಪಾತ್ರದಲ್ಲಿ ತೇಜಸ್ವಿನಿ ನಟಿಸಲಿದ್ದಾರೆ. ಇನ್ನೂ ಸಂಜನಾ ನಾಯ್ಡು ಚಿತ್ರದ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದರು.
ನಂತರ ಮಾತನಾಡಿದ ಚಿತ್ರದ ನಿರ್ಮಾಪಕ ಹಾಗೂ ನಾಯಕ ನಟ ಬುಲೆಟ್ ರಾಜು, ನಾನು ಐದಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಿರ್ಮಾಪಕನಾಗಿ ಇದು ಎರಡನೇ ಚಿತ್ರ. ಮೊದಲ ನಿರ್ಮಾಣದ ಭಿಕ್ಷುಕ ಚಿತ್ರ ಮುಂದಿನ ತಿಂಗಳು ತೆರೆಗೆ ಬರಲಿದೆ. ಯತಿರಾಜ್ ಆ ಚಿತ್ರದಲ್ಲಿ ಇನ್‌ಸ್ಪೆಕ್ಟರ್ ಪಾತ್ರ ಮಾಡಿದ್ದರು. ನಂತರ ಅವರ ನಿರ್ದೇಶನದ ಚಿತ್ರವೊಂದರಲ್ಲಿ ನಾನು ಅಭಿನಯಿಸಿದ್ದೇನೆ. ಈ ಚಿತ್ರದಲ್ಲಿ ಸುಫಾರಿ ಕಿಲ್ಲರ್ ಪಾತ್ರ ಮಾಡಿದ್ದೇನೆ ಎಂದು ತಿಳಿಸಿದರು. ಇನ್ನೂ ನರ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಾಯಕಿ ಸಂಜನಾ ನಾಯ್ಡು ಹೇಳಿದರು. ಈ ಚಿತ್ರದಲ್ಲಿ ವೀಣಾ ಸುಂದರಮ್, ತೇಜಸ್ವಿನಿ, ತನುಕಾ ಕುರಿಬಾಂಡ್ ಖ್ಯಾತಿಯ ರಂಗ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಲಿದ್ದಾರೆ.
ಸಂಗೀತ ನಿರ್ದೇಶಕ ವಿ ಮನೋಹರ್ ಮಾತನಾಡಿ, ಇದೊಂದು ಮಾಸ್ ಸಿನಿಮಾ. ಎರಡರಿಂದ ನಾಲ್ಕು ಹಾಡುಗಳನ್ನು ನಾನೇ ಬರೆದು ಸಂಗೀತ ನಿರ್ದೇಶನ ಮಾಡಲಿದ್ದೇನೆ. ನಿರ್ದೇಶಕ ಯತಿರಾಜ್ ಜೊತೆ ಬಹಳ ವರ್ಷಗಳ ಸ್ನೇಹ ಇದೆ. ಗೆಳತನಕ್ಕೆ ಈ ಸಿನಿಮಾ ಒಪ್ಪಿಕೊಂಡೆ ಎಂದರು. ಬಳಿಕ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮಾತನಾಡಿ, ನಿರ್ದೇಶಕರು ಹೇಳಿರುವ ಹಾಗೇ ಈ ಚಿತ್ರದಲ್ಲಿ ಎರಡರಿಂದ ಮೂರು ಫೈಟ್ ಸೀನ್ಗಳಿರಲಿದೆ. ರಿಯಾಲಿಟಿಗೆ ಹತ್ತಿರ ಆಗುವಾಗೆ ಈ ಆ್ಯಕ್ಷನ್ ಸನ್ನಿವೇಶಗಳನ್ನು ಚಿತ್ರೀಕರಣ ಮಾಡಲಿದ್ದೇವೆ ಎಂದರು.
ಇದನ್ನೂ ಓದಿ:ತೆಲುಗಿನಲ್ಲಿ ಅಬ್ಬರಿಸಲು ರೆಡಿಯಾದ ಶಿವಣ್ಣ: ವೇದ ಟ್ರೈಲರ್ ರಿಲೀಸ್
ಸತ್ಯಂ ಶಿವಂ ಚಿತ್ರದ ಹೈಲೆಟ್ಸ್ ಅಂದ್ರೆ ಪ್ರಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಹಾಗು ಕನ್ನಡದ ಬೇಡಿಕೆಯ ಸ್ಟಂಟ್ ಮಾಸ್ಟರ್ ಥ್ರಿಲ್ಲರ್ ಮಂಜು ಈ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ. ಇದರ ಜೊತೆಗೆ ಫೈವ್ ಸ್ಟಾರ್ ಗಣೇಶ್ ಈ ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಲಿದ್ದಾರೆ. ಶ್ರೀಮತಿ ಯಶೋಧ ರಾಜ್ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಿದ್ಯಾ ನಾಗೇಶ್ ಅವರ ಛಾಯಾಗ್ರಹಣವಿದೆ. ಸಂಕಲನಕಾರರಾಗಿ ಸಂಜೀವ್ ರೆಡ್ಡಿ ಕೆಲಸ ಮಾಡಲಿದ್ದಾರೆ. ಮೈಸೂರು, ಶ್ರೀರಂಗಪಟ್ಟಣದ ಸುತ್ತಮುತ್ತ ಫೆಬ್ರವರಿ 6ರಿಂದ ಸತ್ಯಂ ಶಿವಂ ಸಿನಿಮಾದ ಚಿತ್ರೀಕರಣ ಮಾಡಲು ನಿರ್ದೇಶಕ ಯತಿರಾಜ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.