ಕನ್ನಡ ಚಿತ್ರರಂಗದಲ್ಲಿ ಸಿನಿಮಾಟೋಗ್ರಾಫರ್ಸ್ ನಿರ್ದೇಶಕರಾಗಿ, ನಿರ್ಮಾಪಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಈ ಸಾಲಿನಲ್ಲಿ ಛಾಯಾಗ್ರಾಹಕ ಸತ್ಯ ಹೆಗಡೆ ಕೂಡ ಒಬ್ಬರು. ಕಳೆದ ಎರಡು ದಶಕಗಳಿಂದ ಛಾಯಾಗ್ರಾಹಕರಾಗಿ ಹೆಸರು ಮಾಡಿರುವ ಸತ್ಯ ಹೆಗಡೆ 'ಸತ್ಯ ಹೆಗಡೆ ಸ್ಟುಡಿಯೋ' ಸಂಸ್ಥೆ ಹುಟ್ಟುಹಾಕಿ ಹೊಸ ಪ್ರತಿಭೆಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಮೂಲಕ ಶಾರ್ಟ್ ಫಿಲ್ಮ್ಗಳನ್ನು ನಿರ್ಮಾಣ ಮಾಡುವ ಜೊತೆಗೆ ಸತ್ಯ ಹೆಗಡೆ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್ನಲ್ಲಿ ಅವುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.
ಹೀಗೆ ಯುವಕರು ತಮ್ಮ ನಿರ್ದೇಶಕನಾಗುವ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದು, ಈಗಾಗಲೇ ಈ ಯೂಟ್ಯೂಬ್ ಚಾನೆಲ್ ಮೂಲಕ 11 ಕಿರು ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ 'ಗ್ರಾಚಾರ' ಎಂಬ ಕಿರುಚಿತ್ರ ರಿಲೀಸ್ ಆಗಿದ್ದು, ಮುಂದಿನ ದಿನಗಳಲ್ಲಿ 'ಕಥೆಗಾರನ ಕತೆ' ಹಾಗೂ 'ಅಹಂ ಪರಂ' ಕಿರು ಚಿತ್ರಗಳು ಸತ್ಯ ಹೆಗಡೆ ಸ್ಟುಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಲಿವೆ.
ಹೀಗಾಗಿ ಇತ್ತೀಚೆಗಷ್ಟೇ ಸತ್ಯ ಹೆಗಡೆ ಹಾಗೂ ಅವರ ತಂಡ ಈ ಮೂರು ಕಿರು ಚಿತ್ರಗಳ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಒಂಬತ್ತು ನಿಮಿಷಗಳ 'ಕತೆಗಾರನ ಕಥೆ' ಕಿರು ಚಿತ್ರವನ್ನು ಯುವ ಬರಹಗಾರ ಹಾಗೂ ನಿರ್ದೇಶಕ ಕೌಶಿಕ ಕೂಡುರಸ್ತೆ ನಿರ್ದೇಶನ ಮಾಡಿದ್ದಾರೆ. ಹಾಸನ ಮೂಲದ ಕೌಶಿಕ 'ಹೃದಯದ ಮಾತು' ಸೇರಿದಂತೆ 8 ಕಾದಂಬರಿಗಳನ್ನು ಬರೆದಿದ್ದು, ಕೆಲವೊಂದು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ. ಇಂಜಿನಿಯರಿಂಗ್ ಓದಿಕೊಂಡಿರುವ ಕೌಶಿಕ ಅವರಿಗೆ ಇದು ಮೊದಲ ಪ್ರಯತ್ನ.
ಈಗಷ್ಟೇ ಬಿಡುಗಡೆ ಆಗಿರುವ 'ಗ್ರಾಚಾರ' ಕಿರು ಚಿತ್ರವನ್ನು ಅಜಯ್ ಪಂಡಿತ್ ನಿರ್ದೇಶನ ಮಾಡಿದ್ದು, ಇವರು ಮೂಲತಃ ಸಾಗರದವರು. ಇವರು ಕೂಡ ಸಾಫ್ಟ್ವೇರ್ ಇಂಜಿನಿಯರಿಂಗ್ ಓದಿಕೊಂಡಿದ್ದಾರೆ. ಇನ್ನು ವಿಭಿನ್ನ ಪ್ರಯತ್ನದಂತೆ 'ಅಹಂ ಪರಂ' ಕಿರುಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಇದನ್ನು ವಿನಯ್ ಚಂದ್ರಹಾಸ ನಿರ್ದೇಶನ ಮಾಡಿದ್ದಾರೆ. ಈ ಕಿರುಚಿತ್ರಗಳನ್ನು ನಿರ್ದೇಶಕರಾದ ಗಿರಿರಾಜ್, ಚೇತನ ಕುಮಾರ್ ಹಾಗು ಗುಲ್ಟು ಸಿನಿಮಾ ಖ್ಯಾತಿಯ ನಟ ನವೀನ್ ನೋಡಿ ಮೆಚ್ಚಿಕೊಂಡಿದ್ದಾರೆ.