ಕರ್ನಾಟಕ

karnataka

ETV Bharat / entertainment

ಸರಿಗಮಪ ಸೀಸನ್​ 20 World wide Audition; ಸಪ್ತ ಸಾಗರ ದಾಟುತಿದೆ ಸ್ವರ ಸಂಚಾರ..! - ಭರ್ಜರಿ ಬ್ಯಾಚುಲರ್ಸ್

ಸರಿಗಮಪ ರಿಯಾಲಿಟಿ ಶೋ ವಿದೇಶದಲ್ಲಿ ವಾಸಿಸುತ್ತಿರುವ ಕನ್ನಡ ಸಂಗೀತ ಪ್ರೇಮಿಗಳಿಗೆ ವಿಶೇಷ ಅವಕಾಶ ನೀಡಲು ಮುಂದಾಗಿದೆ.

sarigamapa season 20
ಸರಿಗಮಪ ಸೀಸನ್​ 20

By

Published : Jul 9, 2023, 4:26 PM IST

ಜೀ ಕನ್ನಡ ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವುದರಲ್ಲಿ ಎಂದಿಗೂ ಹಿಂದೆ ಸರಿಯುವುದಿಲ್ಲ. ವಾರದ ಐದು ದಿನ ಧಾರಾವಾಹಿ ಮನರಂಜನೆಯಾದರೆ ಉಳಿದೆರಡು ದಿನ ರಿಯಾಲಿಟಿ ಶೋಗಳು ಜನರ ಮನ ಗೆಲ್ಲುತ್ತವೆ. ಈಗಾಗಲೇ ಪಾರು, ಹಿಟ್ಲರ್​ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಶ್ರೀರಸ್ತು ಶುಭಮಸ್ತು, ಸತ್ಯ, ಭೂಮಿಗೆ ಬಂದ ಭಗವಂತ, ಅಮೃತಧಾರೆ ಸೀರಿಯಲ್​ಗಳು ಸೂಪರ್​ ಹಿಟ್​ ಆಗಿವೆ.

ವೀಕೆಂಡ್​ನಲ್ಲಿ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​, ಛೋಟಾ ಚಾಂಪಿಯನ್​, ಭರ್ಜರಿ ಬ್ಯಾಚುಲರ್ಸ್ ಪ್ರೇಕ್ಷಕರನ್ನು ರಂಜಿಸುತ್ತಿವೆ. ಇದು ಮಾತ್ರವಲ್ಲದೇ ಜನರಿಗೆ ಇನ್ನಷ್ಟು ಮನರಂಜನೆ ನೀಡಲು 'ಸರಿಗಮಪ ಸೀಸನ್​ 20' ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈಗಾಗಲೇ 19 ಸೀಸನ್​ ಪೂರ್ಣಗೊಳಿಸಿರುವ ಈ ಸಂಗೀತ ಕಾರ್ಯಕ್ರಮ 20ನೇ ಸೀಸನ್​ಗಾಗಿ ಸಪ್ತ ಸಾಗರ ದಾಟುತ್ತಿದೆ.

ಹೌದು, 2006ರಲ್ಲಿ ಕನ್ನಡದ ಜೀ ವಾಹಿನಿಯಲ್ಲಿ ಪ್ರಾರಂಭವಾದ ಸರಿಗಮಪ ಸಂಗೀತ ಲೋಕ ಈವರೆಗೂ ಹಲವಾರು ಅದ್ಭುತ ಪ್ರತಿಭೆಗಳನ್ನು ಪರಿಚಯಿಸಿದೆ. ಇಲ್ಲಿಯವರೆಗೂ ಸರಿಗಮಪ ತಂಡ ಪ್ರತಿ ಸೀಸನ್​ಗಾಗಿಯೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆಡಿಷನ್​ ನಡೆಸಿ ಗಾನ ಕೋಗಿಲೆಗಳನ್ನು ಆರಿಸಿ ವೇದಿಕೆಗೆ ಕರೆ ತರುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಸರಿಗಮಪ ತಂಡ ಈ ವಿಚಾರದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಿದೆ.

ಇದನ್ನೂ ಓದಿ:'ಘೋಸ್ಟ್​' ಒಡೆಯನಿಗೆ ಜನ್ಮದಿನದ ಸಂಭ್ರಮ: ಕೌತುಕ ಹೆಚ್ಚಿಸಿದ 'BIG DADDY'‌ ಪೋಸ್ಟರ್​

ಕೇವಲ ನಮ್ಮ ರಾಜ್ಯದ ತುಂಬಾ ಪ್ರಯಾಣಿಸಿ ಸಂಗೀತ ಪ್ರತಿಭೆಗಳನ್ನು ಹುಡುಕಿ ತರುತ್ತಿದ್ದ ತಂಡ ವಿದೇಶಕ್ಕೆ ಹಾರಲು ಸಜ್ಜಾಗಿದೆ. ವಿದೇಶದಲ್ಲಿ ವಾಸಿಸುತ್ತಿರುವ ಕನ್ನಡ ಸಂಗೀತ ಪ್ರೇಮಿಗಳಿಗೆ ಅವಕಾಶ ನೀಡಲು ಮುಂದಾಗಿದೆ. ಇದೇ ಮೊದಲ ಬಾರಿಗೆ ವಿದೇಶದಲ್ಲಿ ಆಡಿಷನ್​ ನಡೆಯಲಿದೆ. ಶೀಘ್ರದಲ್ಲಿ ಸರಿಗಮಪ ಟೀಮ್​ ವಿದೇಶಕ್ಕೆ ಹಾರಿ ಅಲ್ಲಿನ ಪ್ರತಿಭೆಗಳನ್ನು ಆರಿಸಿ ಜಗತ್ತಿಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಇದು ಒಳ್ಳೆಯ ನಿರ್ಧಾರ ಎನ್ನುತ್ತಿದ್ದಾರೆ ಪ್ರೋಮೋ ನೋಡಿದ ಸಂಗೀತ ಪ್ರೇಮಿಗಳು.

ಇನ್ನೂ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಹಂಸಲೇಖ, ವಿಜಯಪ್ರಕಾಶ್, ಅರ್ಜುನ್ ಜನ್ಯ, ಅನುಶ್ರೀ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಬಾರಿಯೂ ಹಂಸಲೇಖ, ವಿಜಯಪ್ರಕಾಶ್ ಮತ್ತು ಅರ್ಜುನ್ ಜನ್ಯ ಎಂದಿನಂತೆ ತೀರ್ಪುಗಾರರಾಗಿ ಕಾಣಿಸಿಕೊಂಡರೆ, ಅನುಶ್ರೀ ನಿರೂಪಣೆ ಮಾಡಲಿದ್ದಾರೆ. ಆದರೆ ಕಳೆದ ಸೀಸನ್​ನಲ್ಲಿ ತೀರ್ಪುಗಾರರ ಜತೆಗೆ ಆರು ಮೆಂಟರ್​​​ಗಳು ಸ್ಪರ್ಧಿಗಳನ್ನು ತಯಾರು ಮಾಡುತ್ತಿದ್ದರು. ಆದರೆ ಈ ಬಾರಿಯೂ ಹಾಗೆಯೇ ಇರಲಿದೆಯಾ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದಲ್ಲದೇ ಈಗಾಗಲೇ ವೀಕೆಂಡ್​ನಲ್ಲಿ ಮೂರು ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿದೆ. ಇದರಲ್ಲಿ ಯಾವುದಾದರೊಂದು ಮುಕ್ತಾಯವಾದ ಬಳಿಕವಷ್ಟೇ ಸರಿಗಮಪ ಸೀಸನ್​ 20 ಪ್ರಾರಂಭವಾಗಬಹುದು. ಬಹುಶಃ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಕೊನೆಗೊಂಡ ಬಳಿಕ ಸಂಗೀತ ಕಾರ್ಯಕ್ರಮ ಶುರುವಾಗಲಿದೆ. ಏಕೆಂದರೆ ಇದರಲ್ಲಿ ತೀರ್ಪುಗಾರರಾಗಿರುವ ಅರ್ಜುನ್​ ಜನ್ಯ ಹಾಗೂ ನಿರೂಪಕಿ ಅನುಶ್ರೀ ಸರಿಗಮಪದಲ್ಲೂ ಇದೇ ಸ್ಥಾನವನ್ನು ತುಂಬಲಿದ್ದಾರೆ. ಶೀಘ್ರದಲ್ಲೇ ವಿದೇಶದಲ್ಲಿ ಸರಿಗಮಪ ಸೀಸನ್​ 20ರ ಆಡಿಷನ್​ ನಡೆಯಲಿದ್ದು, ಯಾವಾಗ ಪ್ರಸಾರವಾಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಶ್ರೇಷ್ಠ ಸಾಹಿತಿ ರವೀಂದ್ರನಾಥ್​ ಠಾಗೋರ್​ ಪಾತ್ರದಲ್ಲಿ ಅನುಪಮ್​ ಖೇರ್​: ಹಿರಿಯ ನಟನ 538ನೇ ಸಿನಿಮಾ!

ABOUT THE AUTHOR

...view details