ಉಜ್ಜಯಿನಿ (ಮಧ್ಯಪ್ರದೇಶ): ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ, ನಟಿ ಸಾರಾ ಅಲಿ ಖಾನ್ ಟೆಂಪಲ್ ರನ್ ಹೊಸ ವಿಚಾರವೇನಲ್ಲ. ಪಟೌಡಿ ವಂಶದ ಕುಡಿ ಆಗಾಗ್ಗೆ ದೇವಸ್ಥಾನಗಳಿಗೆ ಭೇಟಿ ಕೊಡುವ ಮೂಲಕ ಸಾಮರಸ್ಯದ ಸಂದೇಶ ಸಾರುತ್ತಾರೆ. ಅದರಂತೆ ಇಂದು ಬೆಳಗ್ಗೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಗಮನ ಸೆಳೆದಿದ್ದಾರೆ. 'ಭಸ್ಮ ಆರತಿ'ಯಲ್ಲಿ ಭಾಗಿಯಾಗಿ ಮಹಾಕಾಳೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ. ಭಸ್ಮ ಆರತಿ ಇಲ್ಲಿನ ಪ್ರಸಿದ್ಧ ಆಚರಣೆಯಾಗಿದೆ. ಇದನ್ನು ಬೆಳಿಗ್ಗೆ 4 ರಿಂದ 5:30 ರವರೆಗೆ ಬ್ರಹ್ಮ ಮುಹೂರ್ತದಲ್ಲಿ ನಡೆಸಲಾಗುತ್ತದೆ.
ಸಾರಾ ಅಲಿ ಖಾನ್ ಮತ್ತು ವಿಕ್ಕಿ ಕೌಶಲ್ ಅಭಿನಯದ 'ಜರಾ ಹಟ್ಕೆ ಜರಾ ಬಚ್ಕೆ' (Zara Hatke Zara Bachke) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರತಂಡ ಸಿನಿಮಾ ಪ್ರಚಾರದಲ್ಲಿ ನಿರತವಾಗಿದೆ. ಚಿತ್ರ ಬಿಡುಗಡೆಗೂ ಮುನ್ನ ಮಹಾಕಾಳೇಶ್ವರನ ಆಶೀರ್ವಾದ ಪಡೆದಿದ್ದಾರೆ ಸಾರಾ ಅಲಿ ಖಾನ್. ನಟಿ ದೇವಾಲಯದ ಸಂಪ್ರದಾಯವನ್ನು ಅನುಸರಿಸಿ, ಭಸ್ಮ ಆರತಿಯಲ್ಲಿ ಪಾಲ್ಗೊಂಡಿದ್ದಾರೆ. ಗುಲಾಬಿ ಬಣ್ಣದ ಸೀರೆಯುಟ್ಟು ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಭಸ್ಮ ಆರತಿಯಲ್ಲಿ ಮಹಿಳೆಯರು ಸೀರೆ ಉಡುವುದು ಕಡ್ಡಾಯ. ಆ ವೇಳೆ ದೇವಸ್ಥಾನದ ನಂದಿಹಾಳದಲ್ಲಿ ಕುಳಿತು ಪೂಜೆ ಸಲ್ಲಿಸಿದರು. ನಟಿ ಸಾರಾ ಗರ್ಭಗುಡಿಯೊಳಗೆ ಕೂಡ ಹೋಗಿ ಜಲಾಭಿಷೇಕ ನೆರವೇರಿಸಿದರು. ಗಮನಾರ್ಹ ವಿಷಯವೆಂದರೆ, ಅವರು ಮಹಾಕಾಲ್ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಇದೇ ಮೊದಲಲ್ಲ. ಇಲ್ಲಿಗೆ ಅನೇಕ ಬಾರಿ ಬಂದು ಬಾಬಾ ಮಹಾಕಾಲ್ ಅನ್ನು ಪೂಜಿಸಿದ್ದಾರೆ. ದೇವಾಲಯದ ಆವರಣದಲ್ಲಿ ಕೆಲ ಹೊತ್ತು ನಿಂತು ಭಕ್ತಿ ಭಾವ ಸಮರ್ಪಿಸಿದ್ದಾರೆ. ದೇವಾಲಯದ ಅರ್ಚಕ ಸಂಜಯ್ ಗುರು ಮಾತನಾಡಿ, "ಸಾರಾ ಅಲಿ ಖಾನ್ ಬಾಬಾ ಮಹಾಕಾಲ್ನಲ್ಲಿ ಅಚಲ ನಂಬಿಕೆ ಹೊಂದಿದ್ದಾರೆ. ಹಾಗಾಗಿ ಅವರು ಆಗಾಗ್ಗೆ ಇಲ್ಲಿಗೆ ಭೇಟಿ ನೀಡುತ್ತಾರೆ. ಎಂದಿನಂತೆ ಇಂದು ಕೂಡ ವಿಶೇಷ ಪೂಜೆ ಸಲ್ಲಿಸಿಸದ್ದಾರೆ'' ಎಂದು ತಿಳಿಸಿದರು.