ಜನಪ್ರಿಯ ಕಾರ್ಯಕ್ರಮ 'ಕಾಫಿ ವಿತ್ ಕರಣ್' ಸೀಸನ್ 8ರ ಮೂರನೇ ಸಂಚಿಕೆಯಲ್ಲಿ ಬಾಲಿವುಡ್ ಬೆಡಗಿಯರಾದ ಸಾರಾ ಅಲಿ ಖಾನ್ ಹಾಗೂ ಅನನ್ಯಾ ಪಾಂಡೆ ಅತಿಥಿಗಳಾಗಿ ಆಗಮಿಸಿದ್ದಾರೆ. ಬಾಲಿವುಡ್ನ ಖ್ಯಾತ ನಿರ್ಮಾಪಕ - ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಈ ಚಾಟ್ ಶೋನಲ್ಲಿ ನಟಿಮಣಿಯರು ತಮ್ಮ ಮಾಜಿ ಗೆಳೆಯ ಕಾರ್ತಿಕ್ ಆರ್ಯನ್ ಸೇರಿದಂತೆ ವಿವಿಧ ವಿಷಯಗಳ ಕುರಿತಾಗಿ ಮಾತುಕತೆ ನಡೆಸಿದ್ದಾರೆ.
ಮಾತುಕತೆ ಸಮಯದಲ್ಲಿ, ನಿರೂಪಕ ಕರಣ್ ಜೋಹರ್ ನೇರವಾಗಿ ಕಾರ್ತಿಕ್ ಆರ್ಯನ್ ಅವರೊಂದಿಗಿನ ಸಂಬಂಧದ ಬಗ್ಗೆ ಸಾರಾ ಹಾಗೂ ಅನನ್ಯಾ ಬಳಿ ಪ್ರಶ್ನಿಸಿದರು. ಕರಣ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಾರಾ, ಡೇಟಿಂಗ್ ಮತ್ತು ಬ್ರೇಕಪ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. "ಇದೆಲ್ಲವೂ ಸುಗಮವಾಗಿ ಸಾಗುತ್ತಿದೆ ಎಂದು ತೋರಿಸಲು ನಾನು ಬಯಸುವುದಿಲ್ಲ, ಏಕೆಂದರೆ ಅದು ಅಂದಿನ ಪರಿಸ್ಥಿತಿಯ ಮಹತ್ವವನ್ನು ಕಡಿಮೆ ಮಾಡಿಬಿಡುತ್ತದೆ. ಇಂತಹ ವಿಚಾರಗಳು ಯಾವಾಗಲೂ ಸುಲಭವಾಗಿರುವುದಿಲ್ಲ. ನೀವು ಯಾರೊಂದಿಗಾದರೂ ಕನೆಕ್ಷನ್ ಇಟ್ಟುಕೊಂಡಿದ್ದರೆ, ಸ್ನೇಹ, ವೃತ್ತಿಪರ ಅಥವಾ ಪ್ರಣಯ ಯಾವುದೇ ಇರಬಹದು, ವಿಶೇಷವಾಗಿ ಅದು ನನ್ನ ವಿಚಾರಕ್ಕೆ ಬಂದ್ರೆ ನಾನು ಅದರಲ್ಲಿ ಆಳವಾಗಿ ತೊಡಗಿಸಿಕೊಳ್ಳುತ್ತೇನೆ. ಇದೊಂದು ಕ್ಯಾಶುವಲ್ ಆ್ಯಟಿಟ್ಯೂಡ್ ಅಲ್ಲ. ಇದು ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಅಂತಿಮವಾಗಿ ನೀವು ಮೇಲೇರಲೇಬೇಕು, ಮುಂದೆ ಸಾಗಬೇಕು" ಎಂದು ಪ್ರಬುದ್ಧವಾಗಿ ಉತ್ತರಿಸಿದರು.
ಮಾತು ಮುಂದುವರಿಸಿದ ಸಾರಾ ಅಲಿ ಖಾನ್, ಸ್ನೇಹದ (ಯಾರೊಂದಿಗಾದರು) ಶಾಶ್ವತ ಭರವಸೆ ನೀಡುವುದು ಅಥವಾ ನಮ್ಮ ಈ ಎಂಟರ್ಟೈನ್ಮೆಂಟ್ ಫೀಲ್ಡ್ನಲ್ಲಿ ಮತ್ತೆ ಯಾರೊಂದಿಗೂ ಮಾತನಾಡಲು ಬಯಸುವುದಿಲ್ಲ ಎಂದು ಘೋಷಿಸಿಬಿಡುವುದು ಅವಿವೇಕತನ. ನನ್ನ ವೈಯಕ್ತಿಕ ಅನುಭವಗಳ ಮೂಲಕ, ಈ ಉದ್ಯಮದಲ್ಲಿ ಯಾವುದೇ ಪರ್ಮನೆಂಟ್ ಕಮಿಟ್ಮೆಂಟ್ಸ್ ಇರುವುದಿಲ್ಲ ಎಂಬುದನ್ನು ನಾನು ಕಲಿತಿದ್ದೇನೆ. ಪರ್ಮನೆಂಟ್ ಫ್ರೆಂಡ್ಶಿಪ್, ಪಿಂಕಿ ಪ್ರಾಮಿಸಸ್ ಅಥವಾ 'ನಾನು ನಿಮ್ಮೊಂದಿಗೆ ಎಂದಿಗೂ ಮಾತನಾಡುವುದಿಲ್ಲ' ಎಂದು ಹೇಳುವುದು ಪ್ರ್ಯಾಕ್ಟಿಕಲ್ ವಿಚಾರಗಳಲ್ಲ. ಇವೆಲ್ಲವೂ ಯಾವಾಗಲೂ ಸಂಭವಿಸುವುದಿಲ್ಲ'' ಎಂದು ಹೇಳಿದರು.