ಹಿಂದಿ ಸೂಪರ್ ಹಿಟ್ ಚಿತ್ರ 'ಆಶಿಕಿ' ತನ್ನ ಮೂರನೇ ಭಾಗಕ್ಕೆ ತಲುಪಿದೆ. ಬಹುನಿರೀಕ್ಷಿತ ಆಶಿಕಿ 3 ಅನ್ನು ಅನುರಾಗ್ ಬಸು ನಿರ್ದೇಶಿಸಲಿದ್ದಾರೆ ಮತ್ತು ನಟ ಕಾರ್ತಿಕ್ ಆರ್ಯನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ನಾಯಕಿ ಆಯ್ಕೆ ಇನ್ನೂ ಅಂತಿಮವಾಗದಿದ್ದರೂ, ನಟಿ ಸಾರಾ ಅಲಿ ಖಾನ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ನಲ್ಲಿ ಗುರುತಿಸಿಕೊಂಡಿರುವ ಸಾರಾ ಅಲಿ ಖಾನ್ ಮತ್ತು ಕಾರ್ತಿಕ್ ಆರ್ಯನ್ 2020ರಲ್ಲಿ ಲವ್ ಆಜ್ ಕಲ್ ಸಿನಿಮಾ ಶೂಟಿಂಗ್ ಸಮಯದಲ್ಲಿ ಡೇಟಿಂಗ್ ಮಾಡುತ್ತಿದ್ದರು ಎಂಬ ವದಂತಿಗಳಿವೆ. ಆದಾಗ್ಯೂ, ಚಿತ್ರದ ಬಿಡುಗಡೆಗೂ ಕೆಲ ದಿನಗಳ ಮುನ್ನ ಈ ಜೋಡಿ ಬೇರ್ಪಟ್ಟರು ಎಂದು ಹೇಳಲಾಗಿದೆ. ಆಗಾಗ ಈ ಜೋಡಿ ಹೆಸರು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡೋದುಂಟು.
ನಟಿ ಸಾರಾ ಅಲಿ ಖಾನ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆಶಿಕಿ 3 ಬಗ್ಗೆ ಪ್ರಶ್ನಿಸದಿದ್ದರೂ ಆ ಚಿತ್ರದಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಚಿತ್ರ ತಯಾರಕರು ಎಂದಾದರೂ ತನ್ನನ್ನು ಸಂಪರ್ಕಿಸಿದರೆ ತಾನು ಈ ಚಿತ್ರದಲ್ಲಿ ನಟಿಸುತ್ತೇನೆ ಎಂದು ಹೇಳಿದ್ದರು. ಈ ಹಿಂದೆ, ಸಾರಾ ಅವರು ಈ ಚಿತ್ರದ ನಿರ್ಮಾಪಕರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಮೂಲಗಳು ಹೇಳಿಕೊಂಡಿವೆ.
'ಆಶಿಕಿ' ರೊಮ್ಯಾಂಟಿಕ್ ಸಿನಿಮಾ ಆಗಿದ್ದು, ಹೆಚ್ಚಿನ ಸಂಖ್ಯೆಯ ಸಿನಿ ರಸಿಕರು ಇಷ್ಟಪಡುತ್ತಾರೆ. ಮಹೇಶ್ ಭಟ್ ನಿರ್ದೇಶನದ ಆಶಿಕಿ 1990ರಲ್ಲಿ ಬಿಡುಗಡೆಯಾಯಿತು. ರಾಹುಲ್ ರಾಯ್ ಮತ್ತು ಅನು ಅಗರ್ವಾಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಶ್ರದ್ಧಾ ಕಪೂರ್ ಮತ್ತು ಆದಿತ್ಯ ರಾಯ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಆಶಿಕಿ 2 ಚಿತ್ರ 2013ರಲ್ಲಿ ಬಿಡುಗಡೆ ಆಗಿತ್ತು. ಈ ಎರಡೂ ಸಿನಿಮಾಗಳು ಚಿತ್ರರಂಗದಲ್ಲಿ ಅಗಾಧ ಯಶಸ್ಸು ಕಂಡಿವೆ.