ಸ್ಯಾಂಡಲ್ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ'. ಮೊದಲ ಭಾಗ ಅಂದರೆ 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ' ಇತ್ತೀಚೆಗಷ್ಟೇ ತೆರೆಕಂಡು ಸೂಪರ್ ಹಿಟ್ ಆಗಿದೆ. ಪ್ರೇಕ್ಷಕರನ್ನು ಪ್ರೇಮ ಪ್ರಪಂಚಕ್ಕೆ ಕೊಂಡೊಯ್ದ ಸಿನಿಮಾ ಇದು. 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ' ಬಿಡುಗಡೆಗೆ ದಿನಗಣನೆ ಆರಂಭಗೊಂಡಿದ್ದು, ಇಂದು ಟ್ರೇಲರ್ ರಿಲೀಸ್ ಆಗಿದೆ.
ಟ್ರೇಲರ್ ಅನಾವರಣ:ಕಳೆದ ಸೆಪ್ಟೆಂಬರ್ 1ರಂದು 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ' ತೆರೆಗಪ್ಪಳಿಸಿತ್ತು. ನಿರೀಕ್ಷೆಯಂತೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಿನಿಮಾ ಯಶಸ್ಸು ಕಂಡಿತು. ಅಂದ ಕೊಂಡಂತೆ ಕಂಟೆಂಟ್ ಆಧಾರಿತ ಸಿನಿಮಾದಲ್ಲಿ ಹೊಸತನವೂ ಇತ್ತು. ಸಿನಿಮಾ ತೆಲುಗಿಗೂ ಡಬ್ ಆಗಿ ಬಿಡುಗಡೆ ಆಯಿತು. ಪಾರ್ಟ್ 2 ನವೆಂಬರ್ 17 ರಂದು ತೆರೆಕಾಣಲಿದೆ. ಪ್ರಚಾರದ ಭಾಗವಾಗಿ ಇಂದು ಟ್ರೇಲರ್ ಅನಾವರಣಗೊಳಿಸಲಾಗಿದೆ.
ಮನು ಮತ್ತು ಪ್ರಿಯಾಳ ಪ್ರಣಯ ಪ್ರಪಂಚಕ್ಕೆ ಮತ್ತೊಂದು ಹುಡುಗಿಯ ಆಗಮನ. ಕಥಾ ನಾಯಕ ಮನುವಿನ ಸಾಕಷ್ಟು ತುಮುಲಗಳನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ. ಮನು (ರಕ್ಷಿತ್ ಶೆಟ್ಟಿ) ಜೈಲಿನಿಂದ ಹೊರಬರುವ ದೃಶ್ಯದಿಂದ ಟ್ರೇಲರ್ ಆರಂಭಗೊಳ್ಳುತ್ತೆ. ಪ್ರಿಯಾ (ರುಕ್ಮಿಣಿ ವಸಂತ್) ಆಡಿದ ಪ್ರತಿಯೊಂದು ಮಾತುಗಳು ಮನುವಿನ ಕಿವಿಗೆ ಸಮುದ್ರದ ಅಲೆಗಳಂತೆ ಅಪ್ಪಳಿಸುತ್ತದೆ. ಒಂದೊಂದು ಝಲಕ್ನಲ್ಲಿ ಚಿತ್ರದ ಪ್ರತಿಯೊಬ್ಬ ಪಾತ್ರಧಾರಿಗಳು ಬಂದು ಹೊಸ ರೀತಿಯ ಕೌತುಕಕ್ಕೆ ಕಾರಣವಾಗುತ್ತಾರೆ. ಕೊನೆಯಲ್ಲಿ ಪ್ರಿಯಾ ಕಡಲ ತೀರದಲ್ಲಿ ಸಂತೋಷದಿಂದ ನಡೆದುಕೊಂಡು ದೃಶ್ಯವನ್ನು ತೋರಿಸಲಾಗಿದೆ. ತುಂಬಾ ಚೆನ್ನಾಗಿ ಟ್ರೇಲರ್ ಮೂಡಿ ಬಂದಿದೆ.