ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಸಿನಿಮಾಗಳ ಮೇಲೆ ಪ್ರೇಕ್ಷಕರಿಗೆ ಬೆಟ್ಟದಷ್ಟು ನಿರೀಕ್ಷೆಗಳಿರುತ್ತದೆ. ಇವರು ನಟಿಸಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಸಿಂಪಲ್ ಕಥೆಯನ್ನು ವಿಭಿನ್ನವಾಗಿ, ನೋಡುಗರ ಮನಮುಟ್ಟುವಂತೆ ಕಟ್ಟಿಕೊಡುವ ರೀತಿ ನಿಜಕ್ಕೂ ಅಮೋಘ. ಬಹುಶಃ ಈ ಎಲ್ಲ ಕಾರಣದಿಂದ ಶೆಟ್ರ ಸಿನಿಮಾಗಳು ಪ್ರತಿ ಬಾರಿಯೂ ನೆಕ್ಸ್ಟ್ ಲೆವೆಲ್ನಲ್ಲಿ ಸಕ್ಸಸ್ ಕಾಣುತ್ತವೆ. ಅದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ತೆರೆ ಕಂಡ 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ' ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಒಂದು ಪ್ರೇಮಕಥೆ. ಮನು ಮತ್ತು ಪ್ರಿಯಾಳ ಪ್ರೀತಿ ಪ್ರಪಂಚ. ಇವರಿಬ್ಬರ ಪರಿಶುದ್ಧ ಪ್ರೀತಿಯನ್ನು ಕಾವ್ಯಾತ್ಮಕವಾಗಿ ತೋರಿಸಿದ ಪರಿ ನಿಜಕ್ಕೂ ವರ್ಣಿಸಲಾಗದು. ಅದ್ಭುತ ಕಂಟೆಂಟ್ ಜೊತೆಗೆ ಅಭಿನಯ ನೋಡುಗರನ್ನು ಮೋಡಿ ಮಾಡುತ್ತಿದೆ. ಕೆಲವು ಥಿಯೇಟರ್ಗಳಲ್ಲಿ 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ' ಪ್ರದರ್ಶನ ಕಾಣುತ್ತಿದೆ. ಜೊತೆಗೆ ತೆಲುಗು ಭಾಷೆಗೂ ಡಬ್ ಆಗಿ 'ಸಪ್ತ ಸಾಗರಾಲು ದಾಟಿ' ಎಂಬ ಹೆಸರಿನಿಂದ ತೆಲುಗು ಪ್ರೇಕ್ಷಕರನ್ನು ಸೆಳೆಯುತ್ತಿದೆ. ಪುಟ್ಟಿ ಮತ್ತು ಮನುವಿನ ಪ್ರೇಮಕಾವ್ಯಕ್ಕೆ ತೆಲುಗು ರಾಜ್ಯಗಳ ಜನರು ಕೂಡ ಮನಸೋತಿದ್ದಾರೆ.
ಇಷ್ಟೊಂದು ಯಶಸ್ಸು ಕಂಡಿರುವ 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ' ಸಿನಿಮಾ ಇದೀಗ ಓಟಿಟಿಗೂ ಎಂಟ್ರಿ ಕೊಟ್ಟಿದೆ. ಓಟಿಟಿ ಪ್ಲಾಟ್ಫಾರ್ಮ್ ಅಮೆಜಾನ್ ಪ್ರೈಮ್ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಥಿಯೇಟರ್ಗಳಲ್ಲಿ ಸಿನಿಮಾ ನೋಡದವರು ಮನೆಯಲ್ಲೇ ಕುಳಿತು ವೀಕ್ಷಿಸಬಹುದಾಗಿದೆ. ಕೆಲವೇ ದಿನಗಳಲ್ಲಿ ಸೈಡ್ ಬಿ ಕೂಡ ತೆರೆಗೆ ಬರಲಿದ್ದು, ಈ ಕಾರಣಕ್ಕೆ ಸೈಡ್ ಎ ಅನ್ನು ನಿನ್ನೆಯಿಂದ ಓಟಿಟಿಗೆ ಬಿಡಲಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ನಿಮಗೆ ಲಭ್ಯವಿದೆ.