ಕನ್ನಡ ಚಿತ್ರರಂಗದಲ್ಲಿ 'ಕೆಂಪ', 'ಕರಿಯ 2' ಹಾಗೂ 'ಗಣಪ' ಚಿತ್ರಗಳ ಮೂಲಕ ಭರವಸೆ ಮೂಡಿಸಿದ ನಟ ಸಂತೋಷ್ ಬಾಲರಾಜ್. ಇದೀಗ 'ಸತ್ಯಂ' ಎಂಬ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿರುವ ಚಿತ್ರದ ಟೀಸರ್ ಅನ್ನು ಆಧ್ಯಾತ್ಮಕ ಚಿಂತಕ ಜಂಬುನಾಥ್ ಸ್ವಾಮಿ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ತಾತ ಮೊಮ್ಮಗನ ಸುತ್ತ ನಡೆಯುವ ಕಥಾಹಂದರದ ಚಿತ್ರವನ್ನು ಅಶೋಕ ಕಡಬ ನಿರ್ದೇಶಿಸಿದ್ದಾರೆ.
ಟೀಸರ್ ಬಿಡುಗಡೆ ವೇಳೆ ಮಾತನಾಡಿದ ನಾಯಕ ನಟ ಸಂತೋಷ್ ಬಾಲರಾಜ್, ನಾನು ಈ ಹಿಂದೆ ಮಾಡಿದ 'ಕೆಂಪ', 'ಕರಿಯ 2' ಹಾಗೂ 'ಗಣಪ' ಸಿನಿಮಾಗಳೇ ಒಂದಾದರೆ, ಇದು ಆ ಮೂರಕ್ಕಿಂತ ಡಿಫರೆಂಟ್ ಆಗಿ ಮೂಡಿಬಂದಿರುವ ಚಿತ್ರ. ನನ್ನ ಪಾತ್ರದ ಹೆಸರು ಸತ್ಯ. ನನ್ನ ತಂದೆ ಬದುಕಿದ್ದರೆ ಸಿನಿಮಾ ನೋಡಿ ತುಂಬಾ ಇಷ್ಟಪಡುತ್ತಿದ್ದರು. ಇದೊಂದು ಉತ್ತಮ ಚಿತ್ರವಾಗಿ ಮೂಡಿಬರುತ್ತೆ ಎಂದು ಅವರು ಹೇಳಿದ್ದರು. ನನಗೆ ದರ್ಶನ್ ಅವರ ಸಪೋರ್ಟ್ ಕೂಡ ತುಂಬಾ ಇದೆ. ಬಹಳ ಗ್ಯಾಪ್ ಆಗಿತ್ತು. ಇನ್ನಷ್ಟು ವಿಭಿನ್ನ ಚಿತ್ರಗಳ ಮೂಲಕ ನಿಮ್ಮ ಮುಂದೆ ಬರುತ್ತೇನೆ" ಎಂದು ತಿಳಿಸಿದರು.
ಬಳಿಕ ನಟಿ ರಂಜಿನಿ ರಾಘವನ್ ಮಾತನಾಡಿ, "ಸತ್ಯಂ ಟೀಸರ್ಗಾಗಿ ನಾನು ತುಂಬಾ ಕಾದಿದ್ದೆ. ಅಚಾನಕ್ಕಾಗಿ ನಾನೀ ಚಿತ್ರತಂಡಕ್ಕೆ ಸೇರ್ಪಡೆಯಾದೆ. ನನ್ನ ಪಾತ್ರ ಚಿತ್ರದ ಕಥೆಗೆ ಟರ್ನಿಂಗ್ ಪಾಯಿಂಟ್ ಆಗಿದ್ದು, ಕಥೆಯ ಜೊತೆಗೇ ಸಾಗುತ್ತೆ. ಸಂತೋಷ್ ಅವರ ಸಪೋರ್ಟ್ ಚೆನ್ನಾಗಿತ್ತು, ಚಿತ್ರದ ಹಾಡುಗಳು ಚೆನ್ನಾಗಿ ಬಂದಿವೆ" ಎಂದರು.
"ಇದೊಂದು ಫ್ಯಾಮಿಲಿ ಎಂಟರ್ಟೈನರ್. ಪಂಜುರ್ಲಿ ದೈವ ಆರಾಧಿಸುವ ರಾಜಮನೆತನದ ಕುಟುಂಬದಲ್ಲಿ ಒಂದು ಕಳಂಕ ನಡೆದಿರುತ್ತದೆ. ಅಲ್ಲಿ ಸಾವು ನೋವುಗಳು ಆಗಿದ್ದು, ಅದರಲ್ಲಿ ಒಂದು ವಂಶದ ಕುಡಿ ಸುಮಾರು 40 ವರ್ಷದ ನಂತರ ಭೂತ ಕೋಲದ ಪೂಜೆಗೆಂದು ಆ ಊರಿಗೆ ಬಂದಾಗ ನಡೆಯುವ ಕಥೆಯಿದು. ಮೂರು ಶೇಡ್ಗಳು ಇರುವ ಈ ಚಿತ್ರಕ್ಕೆ ದೊಡ್ಡ ಮಟ್ಟದ ಸೆಟ್ಗಳನ್ನು ಹಾಕಿದ್ದೆವು. 2019ರಲ್ಲೇ ನಾವು ಈ ಕಥೆ ಮಾಡಿದ್ದೆವು. ಕಾಂತಾರ ಬರುವ ಮುಂಚೆಯೇ ಈ ಸಬ್ಜೆಕ್ಟ್ ರೆಡಿ ಇತ್ತು" ಎಂದು ನಿರ್ದೇಶಕ ಅಶೋಕ್ ಕಡಬ ಹೇಳಿದರು.
ಮುಂದುವರೆದು, "ಈ ಚಿತ್ರದ ಟೀಸರ್ನಲ್ಲಿ ಕಾಣುವ ಹುಲಿ ಉಗುರು ಒರಿಜಿನಲ್ ಅಲ್ಲ. ಕಾಸ್ಟ್ಯೂಮರ್ ಕೊಟ್ಟಿರುವ ಡೂಪ್ಲಿಕೇಟ್ ಉಗುರು. ಹಾರರ್, ಸಸ್ಪೆನ್ಸ್, ಲವ್ ಕಂಟೆಂಟ್ ಒಳಗೊಂಡ ಈ ಚಿತ್ರವನ್ನು ಕನ್ನಡ, ತೆಲುಗು ಭಾಷೆಯಲ್ಲಿ ಮಾಡಿದ್ದೇವೆ. ರವಿ ಬಸ್ರೂರು ಸಂಗೀತ ಅದ್ಭುತವಾಗಿ ನೀಡಿದ್ದಾರೆ. ಸಿನಿಟೆಕ್ ಸೂರಿ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಕೆ.ವಿ. ರಾಜು ಅವರು ಒಂದಿಷ್ಟು ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಅದನ್ನು ಕಿನ್ನಲ್ ರಾಜ್ ಪೂರ್ಣಗೊಳಿಸಿ, ಒಂದು ಹಾಡನ್ನೂ ಬರೆದಿದ್ದಾರೆ. ಆಡಿಯೋ ಹಕ್ಕು A2 ಮ್ಯೂಸಿಕ್ಗೆ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ" ಎಂದು ತಿಳಿಸಿದರು.