ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ 'ಅಧೀರ' ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಇದೀಗ ಸಂಜಯ್ ದತ್ ಮತ್ತೊಮ್ಮೆ ಸ್ಯಾಂಡಲ್ವುಡ್ಗೆ ಬರಲಿದ್ದಾರೆ. ಪ್ರೇಮ್ ನಿರ್ದೇಶನದಲ್ಲಿ, ಧ್ರುವ ಸರ್ಜಾ ಅಭಿನಯದ ಇನ್ನೂ ಹೆಸರಿಡದ ಚಿತ್ರದಲ್ಲಿ ಸಂಜಯ್ ದತ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ಹೊಸ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ, ಸಂಜಯ್ ದತ್ ನಟಿಸಲಿದ್ದಾರೆ ಅಂತಾ ಕೆಲ ದಿನಗಳ ಹಿಂದೆಯೇ ಗಾಂಧಿನಗರದಲ್ಲಿ ಸುದ್ದಿಯೊಂದು ಕೇಳಿ ಬಂದಿತ್ತು. ಅಲ್ಲದೇ, ಪ್ರೇಮ್ ಅವರು ಸಂಜಯ್ ದತ್ ಅವರನ್ನ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಧ್ರುವ ಸರ್ಜಾ ಸಿನಿಮಾ ಕಥೆ ಬಗ್ಗೆ ಹೇಳುವ ಮೂಲಕ ಮಾತುಕತೆ ನಡೆಸಿದ್ದಾರೆ. ಭೇಟಿ ಸಂದರ್ಭದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಸಂಜಯ್ ದತ್ ಅಭಿನಯಿಸುವುದು ಪಕ್ಕಾ ಆಗಿದೆ ಎನ್ನಲಾಗುತ್ತಿದೆ.
ಸಂಜಯ್ ದತ್ ಅವರ ಅಧೀರನ ಲುಕ್ಗೆ ಭಾರಿ ಜನ ಮೆಚ್ಚುಗೆಗೆ ವ್ಯಕ್ತವಾಗಿತ್ತು. ಹೀಗಾಗಿ ಮುಂದಿನ ಸಿನಿಮಾದಲ್ಲೂ ಅವರನ್ನು ತೆರೆ ಮೇಲೆ ಡಿಫರೆಂಟ್ ಆಗಿ ತೋರಿಸಲು ಪ್ಲ್ಯಾನ್ ಮಾಡಲಾಗುತ್ತಿದೆಯಂತೆ. ಮತ್ತೊಂದು ಕಡೆ ಧ್ರುವ ಸರ್ಜಾ ಸಿನಿಮಾದಲ್ಲಿ ನಟಿಸಲು ಸಂಜಯ್ ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.