ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ದಾಂಪತ್ಯ ಜೀವನದಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ ಎನ್ನುವ ಸುದ್ದಿ ಭಾರಿ ಚರ್ಚೆಗೆ ವೇದಿಕೆ ಸೃಷ್ಟಿಸಿದೆ. ಇನ್ನೇನು ಸಂಪೂರ್ಣ ದೂರವಾಗಲಿದ್ದಾರೆ ಎನ್ನುವ ಮಾತು ದಟ್ಟವಾಗುವಷ್ಟರಲ್ಲಿ ಈ ಜೋಡಿಗೆ ಸಂಬಂಧಿಸಿದ ಹೊಸ ಸುದ್ದಿಯೊಂದು ಹೊರಬಿದ್ದಿದೆ.
ಈ ದಂಪತಿ ಶೋ ಒಂದನ್ನು ಮಾಡುವುದಾಗಿ ಘೋಷಿಸಿದ್ದಾರೆ. ಪಾಕಿಸ್ತಾನದಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. 'ಮಿರ್ಜಾ ಮಲಿಕ್ ಶೋ' ಕಾರ್ಯಕ್ರಮದ ಟೈಟಲ್ ಆಗಿದ್ದು, ಇದರಲ್ಲಿ ದಂಪತಿ ಜೊತೆಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಶೋ ಪಾಕಿಸ್ತಾನದ ಉರ್ದುಫ್ಲಿಕ್ಸ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರವಾಗಲಿದೆ.
ಸಾನಿಯಾ ಮತ್ತು ಶೋಯೆಬ್ 2010ರ ಏಪ್ರಿಲ್ನಲ್ಲಿ ಮದುವೆ ಆದರು. ಶೋಯೆಬ್ ಪಾಕಿಸ್ತಾನ ಮೂಲದವರಾಗಿದ್ದರಿಂದ ಆ ಸಮಯದಲ್ಲಿ ಈ ಇಬ್ಬರ ಮದುವೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಆ ನಂತರ ಅಂತಹ ದೊಡ್ಡ ಸುದ್ದಿ ಏನೂ ಆಗಲಿಲ್ಲ. ಆದ್ರೆ ಕೆಲ ದಿನಗಳ ಹಿಂದೆ ಸಾನಿಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಡಿದ್ದ ಪೋಸ್ಟ್ನಿಂದ ಬೇರ್ಪಡೆ ವದಂತಿ ಶುರುವಾಗಿದೆ. ಆದ್ರೆ ಇದೀಗ 'ಮಿರ್ಜಾ ಮಲಿಕ್ ಶೋ'ನಲ್ಲಿ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದು, ನೆಟ್ಟಿಗರ ಗೊಂದಲಕ್ಕೆ ಕಾರಣವಾಗಿದೆ.