ನಟ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಕನ್ನಡದ ಜನಪ್ರಿಯ ಕಾರ್ಯಕ್ರಮ ''ಬಿಗ್ ಬಾಸ್'' ಮನೆಯಲ್ಲಿ ಫ್ಲವರ್ ವರ್ಸಸ್ ಫೈಯರ್ ಟೆಸ್ಟ್ ನಡೆದಿದೆ. ಪರಿಣಾಮ, ವಿನಯ್ ಮತ್ತು ಸಂಗೀತಾ ಮಧ್ಯೆ ಮತ್ತೆ ಹಳೆಯ ಕಿಡಿ ಹೊತ್ತಿಕೊಂಡಿರುವಂತಿದೆ. ಅದರ ಸುಳಿವು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಈ ದಿನದ ಮೊದಲ ಪ್ರೋಮೋದಲ್ಲಿಯೇ ಕಾಣಿಸಿಕೊಂಡಿದೆ.
ಬಿಗ್ ಬಾಸ್ ಪ್ರೋಮೋ: ''ಗುಣ - ಋಣದ ಗುದ್ದಾಟದಲ್ಲಿ ಗೆದ್ದೋರು ಯಾರು?'' ಶೀರ್ಷಿಕೆಯಡಿ ಇಂದಿನ ಸಂಚಿಕೆಯ ಪ್ರೋಮೋವನ್ನು ಕಲರ್ಸ್ ಕನ್ನಡ ಸೋಷಿಯಲ್ ಮೀಡಿಯಾದಲ್ಲಿ ಅನಾವರಣಗೊಳಿಸಿದೆ. ಮನೆಯ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಚಟುವಟಿಕೆ ನೀಡಿದ್ದಾರೆ. ಒಂದಿಷ್ಟು ಬಿಳಿ, ಮತ್ತೊಂದಿಷ್ಟು ಕಪ್ಪು ಹೂಗಳನ್ನು ಇಡಲಾಗಿದೆ. ಒಬ್ಬೊಬ್ಬ ಸದಸ್ಯರು ಬಂದು, ಮನೆಯೊಳಗೆ ತಮ್ಮ ದೃಷ್ಟಿಯಲ್ಲಿ ಅತ್ಯಂತ ಧನಾತ್ಮಕ ವ್ಯಕ್ತಿ ಯಾರು ಎಂದು ಹೇಳಿ ಅವರಿಗೆ ಬಿಳಿ ಹೂ ನೀಡಬೇಕು. ಹಾಗೆಯೇ ಯಾರು ಅತ್ಯಂತ ಋಣಾತ್ಮಕ ವ್ಯಕ್ತಿ ಎಂಬುದನ್ನೂ ತಿಳಿಸಿ ಅವರಿಗೆ ಕಪ್ಪು ಹೂ ನೀಡಬೇಕು. ಪ್ರತಿಯೊಬ್ಬರು ತಮ್ಮ ನಿಖರ ಕಾರಣಗಳನ್ನು ಸದಸ್ಯರೆ ಎದುರು ಸ್ಪಷ್ಟಪಡಿಸಬೇಕು.
ಈ ಟಾಸ್ಕ್ನಲ್ಲಿ ಬಿಳಿ ಹೂಗಳನ್ನು ಪಡೆದುಕೊಂಡವರ ಮೊಗದಲ್ಲಿ ಹೂವಿನಂಥ ನಗು ಅರಳಿದರೆ, ಕಪ್ಪು ಹೂ ಪಡೆದವರ ಕಣ್ಣುಗಳಲ್ಲಿ ಅಸಮಧಾನದ ಹೊಗೆ ಎದ್ದಿದೆ. ಮೊದಲು ಸಂಗೀತಾ ಅವರು ವಿನಯ್ ಅವರಿಗೆ ಕಪ್ಪು ಹೂವು ನೀಡಿ, 'ಮೊದಲಿಂದಲೂ ನೆಗೆಟಿವಿಟಿಯ ರೂಟೇ ನೀವು' ಎಂದು ಆರೋಪಿಸಿದ್ದಾರೆ. ಅದಕ್ಕೆ ಠಕ್ಕರ್ ನೀಡಿದ ವಿನಯ್, 'ನಾನು ನೆಗೆಟಿವಿಟಿಗೆ ಬೇರು. ಆದರೆ ಬೇರು ಬಿಡಬೇಕು ಅಂದ್ರೆ ಅದಕ್ಕೊಂದು ಬೀಜ ನೆಡಬೇಕಲ್ವಾ? ಆ ಬೀಜವೇ ಸಂಗೀತಾ. ಇಲ್ಲದಿರೋ ಕಾರಣಕ್ಕೆ ಅವರು ಮೂಗು ತೂರಿಸಿ, ಅದನ್ನೊಂದು ಮೊಮೆಂಟ್ ಮಾಡಿದವರು ಅವರು' ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಸಂಗೀತಾ, 'ಈವತ್ತಿಗೂ ನಾನದಕ್ಕೆ ಸ್ಟ್ಯಾಂಡ್ ತಗೊತೀನಿ' ಎಂದಿದ್ದಾರೆ. ವಿನಯ್, 'ಯು ಪ್ಲೀಸ್ ಶಟ್ಅಪ್' ಎಂದು ಗುಡುಗಿದ್ದಾರೆ. ಸಂಗೀತಾ ಕೂಡ, 'ಮೈಂಡ್ ಯುವರ್ ಲ್ಯಾಂಗ್ವೇಜ್' ಎಂದು ಪ್ರತ್ಯುತ್ತರ ಕೊಟ್ಟಿದ್ದಾರೆ.