ಕರ್ನಾಟಕ

karnataka

ETV Bharat / entertainment

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಿಧಿವಶ; ಅಂಬೇಡ್ಕರ್​ ಮೈದಾನದಲ್ಲಿ ಅಂತಿಮ ದರ್ಶನ

Senior actress Leelavati passes away: ಕನ್ನಡದ ಹಿರಿಯ ನಟಿ ಲೀಲಾವತಿ ವಿಧಿವಶರಾಗಿದ್ದಾರೆ.

Senior actress Leelavati passes away
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ನಿಧನ

By ETV Bharat Karnataka Team

Published : Dec 8, 2023, 6:17 PM IST

Updated : Dec 9, 2023, 7:07 AM IST

ಬೆಂಗಳೂರು:ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿ ಲೀಲಾವತಿ ಶುಕ್ರವಾರ ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ತಾಯಿಯ ನಿಧನವನ್ನು ಪುತ್ರ ವಿನೋದ್​ ರಾಜ್​ ಖಚಿತಪಡಿಸಿದ್ದಾರೆ. ಲೀಲಾವತಿ ನಿಧನಕ್ಕೆ ಗಣ್ಯಾತಿಗಣ್ಯರು, ಚಿತ್ರರಂಗದ ತಾರೆಯರು, ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ.

ನೆಲಮಂಗಲದ ಅಂಬೇಡ್ಕರ್​ ಮೈದಾನದಲ್ಲಿ ಲೀಲಾವತಿ ಅವರ ಪಾರ್ಥಿವ ಶರೀರ ಇಡಲು ವ್ಯವಸ್ಥೆ ಮಾಡಲಾಗಿದೆ. ಶನಿವಾರ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ಮಧ್ಯಾಹ್ನ 3 ಗಂಟೆಗೆ ಸೋಲದೇವನಹಳ್ಳಿಯಲ್ಲಿರುವ ಲೀಲಾವತಿ ಅವರ ತೋಟದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ.

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ

ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಡಾ.ಲೀಲಾವತಿ, ಕನ್ನಡ ಚಿತ್ರರಂಗದ ಅಮ್ಮನಂತಿದ್ದರು. ಹಿರಿಯ ನಟಿಯ ಮನೋಜ್ಞ ಅಭಿನಯಕ್ಕೆ ಸಾಕಷ್ಟು ಪ್ರತಿಷ್ಟಿತ ಪ್ರಶಸ್ತಿಗಳೂ ಸಂದಿವೆ. ಅಷ್ಟೇ ಅಲ್ಲ, ಕನ್ನಡ ನಾಡು, ನುಡಿಗೆ ಸಂಬಂಧಿಸಿದ ಹೋರಾಟಗಳಲ್ಲೂ ಪಾಲ್ಗೊಳ್ಳುತ್ತಿದ್ದರು. ಕನ್ನಡದ ಹೊರತಾಗಿ ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲೂ ನಟಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಇವರ ಹುಟ್ಟೂರು.

ಸಿಎಂ, ಡಿಸಿಎಂ ಸಂತಾಪ:ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಷಿಯಲ್​ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. "ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟು ಮಾಡಿದೆ. ಕಳೆದ ವಾರವಷ್ಟೇ ಅವರು ಅನಾರೋಗ್ಯಕ್ಕೀಡಾದ ವಿಚಾರ ತಿಳಿದು ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಪುತ್ರ ವಿನೋದ್ ರಾಜ್ ಕುಮಾರ್ ಅವರೊಂದಿಗೆ ಮಾತನಾಡಿದ್ದೆ. ಹಲವು ದಶಕಗಳ ಕಾಲ ತಮ್ಮ‌ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಲೀಲಾವತಿ ಅವರು ಗುಣಮುಖರಾಗಿ ಇನ್ನಷ್ಟು ಕಾಲ ನಮ್ಮ ನಡುವೆ ಇರುತ್ತಾರೆಂಬ ನನ್ನ ನಂಬಿಕೆ ಹುಸಿಯಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಬರೆದಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ

"ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ಅತೀವ ದುಃಖ ಉಂಟುಮಾಡಿದೆ. ಇತ್ತೀಚೆಗಷ್ಟೇ ಅವರು ನೆಲಮಂಗಲ ಬಳಿಯ ಸೋಲದೇವನಹಳ್ಳಿಯಲ್ಲಿ ನಿರ್ಮಿಸಿದ್ದ ಪಶು ಆಸ್ಪತ್ರೆಯನ್ನು ಉದ್ಘಾಟಿಸಿದ್ದೆ. ಸಂಕಷ್ಟದಲ್ಲಿದ್ದರೂ ಸಮಾಜ ಸೇವೆ ಮಾಡಬೇಕೆನ್ನುವ ಅವರ ಕಳಕಳಿ ನನ್ನ ಹೃದಯ ಮುಟ್ಟಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಪುತ್ರ ವಿನೋದ್‌ ರಾಜ್‌ ಕುಟುಂಬವರ್ಗದವರು ಹಾಗೂ ಅಭಿಮಾನಿಗಳ ನೋವಿನಲ್ಲಿ ನಾನೂ ಕೂಡ ಭಾಗಿ. ಓಂ ಶಾಂತಿ" ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಸಂತಾಪ ಸೂಚಿಸಿದ್ದಾರೆ.

ಲೀಲಾವತಿ ನಿಧನ ದುಃಖ ತಂದಿದೆ: "ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಕನ್ನಡದ ಹಿರಿಯ ಬಹುಭಾಷಾ ನಟಿ ಲೀಲಾವತಿ ನಿಧನರಾಗಿದ್ದು ಅತ್ಯಂತ ದುಃಖ‌ ತಂದಿದೆ. ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು, ಅವರ ಆತ್ಮಕ್ಕೆ ಚಿರಶಾಂತಿ‌ಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಪ್ರತಿಪಕ್ಷ ನಾಯಕ ಆರ್​.ಅಶೋಕ್​ ಎಕ್ಸ್​ನಲ್ಲಿ ಬರೆದಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ

ಇದನ್ನೂ ಓದಿ:ಕಾವೇರಿ ಕಿಚ್ಚು: ರೈತರ ಹೋರಾಟಕ್ಕೆ ಹಿರಿಯ ನಟಿ ಲೀಲಾವತಿ ಸಾಥ್

"ಕನ್ನಡ ಚಿತ್ರರಂಗದ ಶ್ರೇಷ್ಠ ನಟಿಯರಲ್ಲಿ ಒಬ್ಬರು, ಬಹುಭಾಷಾ ಕಲಾವಿದರಾದ ಲೀಲಾವತಿ ಅವರ ನಿಧನದ ವಾರ್ತೆ ಕೇಳಿ ಬಹಳ ನೋವುಂಟಾಯಿತು. ನಾಯಕಿಯಾಗಿ ಮಾತ್ರವಲ್ಲದೆ, ಪೋಷಕ ಪಾತ್ರಗಳಿಗೂ ಜೀವ ತುಂಬಿ ಬೆಳ್ಳಿತೆರೆಯ ಮೇಲೆ ಅವುಗಳ ಹೆಜ್ಜೆಗುರುತುಗಳು ಮೂಡುವಂತೆ ಮಾಡಿದವರು ಅವರು. ಅಮ್ಮ, ಅಕ್ಕ, ಅತ್ತೆ ಸೇರಿ ಅನೇಕ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ನಟಿಸುತ್ತಿದ್ದರು. ಭಕ್ತ ಕುಂಬಾರ, ವೀರ ಕೇಸರಿ, ಭಾಗ್ಯದೇವತೆ, ಸೋತು ಗೆದ್ದವಳು, ನಂದಾದೀಪ, ವಿಧಿ ವಿಲಾಸ, ಸಂತ ತುಕಾರಾಂ, ರಣಧೀರ ಕಂಠೀರವ ಸೇರಿ ಅವರು ನಟಿಸಿದ್ದ ಅನೇಕ ಚಿತ್ರಗಳು ಕನ್ನಡಿಗರ ಮನೆ ಮನಗಳನ್ನು ತುಂಬಿರುತ್ತವೆ. ಲೀಲಾವತಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಪುತ್ರ ವಿನೋದ್ ರಾಜ್ ಅವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ:ಹೊಟ್ಟೆಯ ಕ್ಯಾನ್ಸರ್​ನಿಂದ ನಟ ಜೂನಿಯರ್ ಮೆಹಮೂದ್ ನಿಧನ

Last Updated : Dec 9, 2023, 7:07 AM IST

ABOUT THE AUTHOR

...view details