ಬೆಂಗಳೂರು:ಕನ್ನಡ ಚಿತ್ರರಂಗದಲ್ಲಿ ಖಳ ನಾಯಕನ ಪಾತ್ರಗಳಿಂದಲೇ ಹೆಚ್ಚು ಪ್ರಖ್ಯಾತಿ ಹೊಂದಿದ್ದ ಹಿರಿಯ ನಟ ಲಕ್ಷ್ಮಣ್ ಇನ್ನಿಲ್ಲ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಮುಂಜಾವು 4 ಗಂಟೆಯ ಸುಮಾರಿಗೆ ಬೆಂಗಳೂರಿನಲ್ಲಿ ಸ್ವಗೃಹದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಲಕ್ಷ್ಮಣ್ ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗು ಮೂವರು ಮಕ್ಕಳನ್ನು ಅಗಲಿದ್ದಾರೆ.
ಭಾನುವಾರ ರಾತ್ರಿ ಎದೆನೋವು ಕಾಣಿಸಿಕೊಂಡಿದೆ. ಇಂದು ನಸುಕಿನ ಜಾವ 3.30 ಸುಮಾರಿಗೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಇಸಿಜಿ ಮಾಡಿ ಮತ್ತೆ ಮನೆಗೆ ಕರೆದುಕೊಂಡು ಬರಲಾಗಿದೆ. ಆದರೆ, ಇಂದು ಮುಂಜಾನೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಸ್ವಗೃಹದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ: ಕನ್ನಡದ ಶ್ರೇಷ್ಠ ನಟರಾದ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಟೈಗರ್ ಪ್ರಭಾಕರ್, ಶಂಕರ್ ನಾಗ್, ಅಂಬರೀಶ್, ರವಿಚಂದ್ರನ್, ಶಿವರಾಜ್ ಕುಮಾರ್, ಸುದೀಪ್ ಹೀಗೆ ದಿಗ್ಗಜರ ಸಿನಿಮಾಗಳಲ್ಲಿ ನಟಿಸಿರುವ ಹಿರಿಮೆ ಲಕ್ಷ್ಮಣ್ ಅವರದ್ದು. ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ಲಕ್ಷ್ಮಣ್ ಬಣ್ಣ ಹಚ್ಚಿದ್ದರು. ಕರುಳಿನ ಕೂಗು, ಒಲವಿನ ಉಡುಗೊರೆ, ಸಾಂಗ್ಲಿಯಾನ, ಯಜಮಾನ, ಸೂರ್ಯವಂಶ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಅಭಿನಯ ಚಾತುರ್ಯತೆ ತೋರಿದ್ದರು.
ಇದನ್ನೂ ಓದಿ:ನಟಿ ರಚಿತಾ ರಾಮ್ ವಿರುದ್ಧ ಮತ್ತೊಂದು ದೂರು ದಾಖಲು