ಓಂ ಸಿನಿಮಾದಲ್ಲಿ ಡಾನ್ ರೈ ಪಾತ್ರದಿಂದಲೇ ಲೈಮ್ಲೈಟ್ಗೆ ಬಂದ ನಟರುಗಳಲ್ಲಿ ಹರೀಶ್ ರೈ ಕೂಡ ಒಬ್ಬರು. ಈ ಸಿನಿಮಾ ಸಕ್ಸಸ್ ಬಳಿಕ ಹರೀಶ್ ರೈ ಕನ್ನಡದ ನೂರಾರು ಸಿನಿಮಾಗಳಲ್ಲಿ ಖಳ ನಟ ಹಾಗು ಪೋಷಕ ಪಾತ್ರಗಳಿಂದಲೇ ಇವರು ಹೆಚ್ಚು ಬೇಡಿಕೆ ಹೊಂದಿದ್ದರು. ಕೆಜಿಎಫ್ ಸಿನಿಮಾದಲ್ಲಿ ಚಾಚಾ ಪಾತ್ರದಿಂದ ಮತ್ತಷ್ಟು ಖ್ಯಾತಿ ಹೊಂದಿದ್ದ ಹರೀಶ್ ರೈ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಥೈರಾಯ್ಡ್ನಿಂದ ಬಳಲುತ್ತಿದ್ದ ನಟನಿಗೆ ಗಂಟಲಲ್ಲಿ ಗಡ್ಡೆಯಾಗಿ ಅದು ಕ್ಯಾನ್ಸರ್ಗೆ ತಿರುಗಿತ್ತು. ಆರೋಗ್ಯ ಸ್ವಲ್ಪ ಹದೆಗೆಟ್ಟ ಕೂಡಲೇ ಆಪರೇಷನ್ ಮಾಡಿಸಿಕೊಂಡಿದ್ದೇನೆ. ಚಿಕಿತ್ಸೆಗಾಗಿ ಲಕ್ಷಗಟ್ಟಲೆ ಹಣ ಖರ್ಚಾಗುತ್ತೆ ಎಂದು ವೈದ್ಯರು ಹೇಳಿರುವುದಾಗಿ ಹರೀಶ್ ರೈ ಇತ್ತೀಚೆಗೆ ತಿಳಿಸಿದ್ದರು.
ನಟ ಹರೀಶ್ ರೈ ಮಾಧ್ಯಮದೊಂದಿಗೆ ಮಾತನಾಡಿದರು ಹರೀಶ್ ರೈ ಹೇಳುವ ಹಾಗೆ, ಅವರು ತಿಂಗಳಿಗೆ ಎರಡು ಲಕ್ಷ ರೂಪಾಯಿಯ ಮಾತ್ರೆ ಸೇವಿಸುತ್ತಿದ್ದಾರಂತೆ. ಹೀಗೆ ಹತ್ತು ತಿಂಗಳ ಮಟ್ಟಿಗೆ ತೆಗೆದುಕೊಳ್ಳಬೇಕು. ಈ ಮಾತ್ರೆ ಖರೀದಿಸುವುದಕ್ಕೆ ಹಣದ ಅವಶ್ಯಕತೆ ಇದೆ. ಈ ವಿಚಾರ ಕನ್ನಡ ಚಿತ್ರರಂಗದಲ್ಲಿ ಪ್ರಚಾರವಾಗುತ್ತಿದ್ದಂತೆ ನಟರಾದ ಶಿವರಾಜ್ ಕುಮಾರ್, ಯಶ್, ದುನಿಯಾ ವಿಜಯ್, ನಿರ್ದೇಶಕ ರವಿ ಶ್ರೀವತ್ಸ, ಖಳ ನಟ ಕೋಟೆ ಪ್ರಭಾಕರ್, ನಿರ್ಮಾಪಕ ವಿಜಯ್ ಕಿರಂಗದೂರ್ ಸೇರಿದಂತೆ ಸಾಕಷ್ಟು ಚಿತ್ರರಂಗದ ಸ್ನೇಹಿತರು ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಸದ್ಯದ ಆರೋಗ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿರುವ ಹರೀಶ್ ರೈ, ಮೊದಲು ಈ ಖಾಯಿಲೆ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಯಾವಾಗ ನನ್ನ ಶ್ವಾಸಕೋಶಕ್ಕೆ ಸೋಂಕು ತಗುಲಿ ಕ್ಯಾನ್ಸರ್ಗೆ ತಿರುಗಿತ್ತೋ ಆಗ ಯೋಚಿಸಲು ಪ್ರಾರಂಭಿಸಿದೆ. ಈ ಸಂದರ್ಭದಲ್ಲಿ ವೈದ್ಯರು ಕೂಡ ಹಣದ ವಿಚಾರವಾಗಿ ಹೆಚ್ಚು ಒತ್ತಡ ತೆಗೆದುಕೊಳ್ಳದೇ ಆರಾಮಾಗಿ ವಿಶ್ರಾಂತಿ ಪಡೆದರೆ ನಿಮ್ಮ ಆರೋಗ್ಯ ಸುಧಾರಿಸಲಿದೆ ಎಂದಿದ್ದರು. ಯಾವಾಗ ಮಾಧ್ಯಮದಲ್ಲಿ ಹರೀಶ್ ರೈಗೆ ಕ್ಯಾನ್ಸರ್ ಇದೆ ಎಂದು ಸುದ್ದಿಯಾಯಿತೋ ಚಿತ್ರರಂಗದ ಸಾಕಷ್ಟು ನಟರು, ನಿರ್ದೇಶಕರು ಹಾಗು ನಿರ್ಮಾಪಕರು ಸಹಾಯ ಮಾಡುವುದಾಗಿ ಬಂದರು. ನಾನು ಗುಣಮುಖವಾಗಿ ಮತ್ತೆ ಸಿನಿಮಾದಲ್ಲಿ ಅಭಿನಯಿಸುತ್ತೇನೆ ಎಂದು ಹರೀಶ್ ರೈ ಭರವಸೆಯ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ:ಕೆಜಿಎಫ್ ಸಿನಿಮಾ ನಟ ಹರೀಶ್ ರೈಗೆ ಕ್ಯಾನ್ಸರ್: ಚಿಕಿತ್ಸೆ ಬಗ್ಗೆ ಈಟಿವಿ ಭಾರತದ ಜೊತೆ ಪ್ರತಿಕ್ರಿಯೆ