'ಕರ್ನಾಟಕದ ಕುಳ್ಳ' ಎಂದೇ ಕರೆಸಿಕೊಂಡು ಇಡೀ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ದ್ವಾರಕೀಶ್. ನಟ, ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ದ್ವಾರಕೀಶ್ ಚಿತ್ರ ನಿರ್ಮಾಣ ಸಂಸ್ಥೆ ಮೂಲಕ ಹಲವು ಸೂಪರ್ ಹಿಟ್ ಸಿನಿಮಾದ ಜೊತೆಗೆ ಸಾಕಷ್ಟು ನಟ, ನಟಿಯರನ್ನು ಬಣ್ಣದ ಲೋಕಕ್ಕೆ ಪರಿಚಯಿಸಿದ್ದಾರೆ. ಇಂತಹ ಒಬ್ಬ ಅದ್ಭುತ ಕಲಾವಿದ ಇನ್ನಿಲ್ಲ ಎಂಬ ಸುಳ್ಳು ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ರೀತಿಯ ಸುದ್ದಿ ಸ್ವತಃ ದ್ವಾರಕೀಶ್ ಮತ್ತು ಅವರ ಕುಟುಂಬಕ್ಕೆ ನೋವುಂಟು ಮಾಡುತ್ತಿದೆ.
ನಿನ್ನೆಯಷ್ಟೇ ಸರಿಯಾಗಿ ತಿಳಿದುಕೊಳ್ಳದ ಅವಿವೇಕಿಗಳು ಸೋಷಿಯಲ್ ಮೀಡಿಯಾದಲ್ಲಿ ದ್ವಾರಕೀಶ್ ಫೋಟೋ ಹಾಕಿ ಸಂತಾಪ ಸೂಚಿಸುವ ಮೂಲಕ ವಿಕೃತಿ ಮೆರೆದಿದ್ದಾರೆ. ಅಷ್ಟೇ ಅಲ್ಲ, ಕೆಲ ಯೂಟ್ಯೂಬರ್ಸ್ ಕೂಡ ದ್ವಾರಕೀಶ್ ನಿಧನ ಹೊಂದಿದ್ದಾರೆ ಎಂಬ ವದಂತಿ ಹಬ್ಬಿಸಿದ್ದಾರೆ. ಈ ವಿಚಾರವಾಗಿ ದ್ವಾರಕೀಶ್ ಅವರ ಮಗ ಯೋಗಿ ದ್ವಾರಕೀಶ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿದಾಗ ಅವರು ತುಂಬಾನೇ ಬೇಸರದಿಂದ ಮಾತನಾಡಿದ್ದಾರೆ.
ನಮ್ಮ ತಂದೆ ಬಗ್ಗೆ ಯಾರೋ ಯಾವುದೋ ಕಾರಣಕ್ಕೆ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಬಹಳ ನೋವಿನಿಂದ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ನಮ್ಮ ತಂದೆ ಸಿನಿಮಾಗಳನ್ನು ನಿರ್ಮಾಣ ಮಾಡ್ತಾ ಇಲ್ಲಾ. ಆದರೆ ಒಂದು ಕಾಲದಲ್ಲಿ ಬಿಗ್ ಬಜೆಟ್ ಹಾಗೂ ದೊಡ್ಡ ದೊಡ್ಡ ನಟರ ಸಿನಿಮಾಗಳನ್ನು ಮಾಡಿರುವ ಖ್ಯಾತಿ ಅವರದ್ದು. ಅಂತಹ ವ್ಯಕ್ತಿ ಬಗ್ಗೆ ಸುಳ್ಳು ಮಾಹಿತಿ ನೀಡುವುದು ಸರಿಯಲ್ಲ ಎಂದು ಯೋಗಿ ದ್ವಾರಕೀಶ್ ಹೇಳಿದ್ದಾರೆ.