ಕನ್ನಡ ಚಿತ್ರರಂಗಕ್ಕೆ 2022 ಸುವರ್ಣ ಕಾಲ ಅಂತಾನೆ ಹೇಳಬಹುದು. ಭಾರತೀಯ ಸಿನಿಮಾರಂಗ ಅಲ್ಲದೇ ವಿಶ್ವದಾದ್ಯಂತ ಕನ್ನಡ ಚಿತ್ರಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ. ಕನ್ನಡ ಚಿತ್ರರಂಗದವರನ್ನು ಮೂಲೆಗುಂಪು ಮಾಡಿದವರೇ ಈಗ ಸ್ಯಾಂಡಲ್ವುಡ್ ಬಗ್ಗೆ ಮೆಚ್ಚಿ ಕೊಂಡಾಡುತ್ತಿದ್ದಾರೆ. ಯಾರಿಗೂ ಕಡಿಮೆ ಇಲ್ಲವೆನ್ನುವಂತೆ ಸಾಲು ಸಾಲು ಪ್ಯಾನ್ ಇಂಡಿಯಾ ಚಿತ್ರಗಳು ನಿರ್ಮಾಣವಾಗುತ್ತಿವೆ. ಬಹುತೇಕ ಸಿನಿಮಾಗಳು 100 ಕೋಟಿ ಕ್ಲಬ್ ಸೇರಿದೆ.
ಜೇಮ್ಸ್:ಕನ್ನಡ ಚಿತ್ರರಂಗದಲ್ಲಿ 2022ರಲ್ಲಿ ಬಿಡುಗಡೆಯಾದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ''ಜೇಮ್ಸ್'. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನದ ಬಳಿಕ ತೆರೆಕಂಡ ಚಿತ್ರವಿದು. ಮಾರ್ಚ್ 17ರಂದು ಕನ್ನಡ ಭಾಷೆ ಅಲ್ಲದೇ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಬಿಡುಗಡೆ ಮಾಡಲಾಯಿತು. ತೆರೆಕಂಡ ಮೊದಲ ದಿನವೇ ಸುಮಾರು 30 ಕೋಟಿ ರೂ. ಗಳಿಸಿದ್ದ ಜೇಮ್ಸ್ ನಾಲ್ಕು ದಿನಕ್ಕೆ 100 ಕೋಟಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿತ್ತು. ಬಹದ್ದೂರ್ ಚೇತನ್ ನಿರ್ದೇಶನದ ಈ ಸಿನಿಮಾದಲ್ಲಿ ಪುನೀತ್ ಅವರಿಗೆ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ. ಅಪ್ಪು ಅಭಿಮಾನಿಯಾಗಿರೋ ಕಿಶೋರ್ ಪತ್ತಿಕೊಂಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಕೆಜಿಎಫ್ 2:ಜೇಮ್ಸ್ ಚಿತ್ರದ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆದ ಹೈ ವೋಲ್ಟೆಜ್ ಚಿತ್ರ ಕೆಜಿಎಫ್ ಚಾಪ್ಟರ್ 2. ಕೆಜಿಎಫ್ ಚಾಪ್ಟರ್ 1ನ ಮುಂದುವರೆದ ಭಾಗವಾದ ಕೆಜಿಎಫ್ 2 ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ಏಪ್ರಿಲ್ 14ರಂದು ಬಿಡುಗಡೆ ಆಯಿತು. ರಾಕಿ ಭಾಯ್ ಯಶ್ ಪಂಚಿಂಗ್ ಡೈಲಾಗ್, ಆ್ಯಕ್ಷನ್ ಸೀನ್ಗಳು ಪ್ರೇಕ್ಷಕರನ್ನು ರಂಜಿಸಿತು. ಬಾಲಿವುಡ್ ನಟ ಸಂಜಯ್ ದತ್ ಅಧೀರನಾಗಿ ಅಭಿಮಾನಿಗಳಿಗೆ ಇಷ್ಟ ಆದರು. ಇಡೀ ಇಂಡಿಯನ್ ಫಿಲ್ಮ್ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 1,300 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆಯಿತು. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವನ್ನು ವಿಜಯ್ ಕಿರಂಗದೂರ್ ನಿರ್ಮಿಸಿದ್ದಾರೆ.
777 ಚಾರ್ಲಿ:ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಜೂನ್ 10ರಂದು ಬಿಡುಗಡೆಯಾಯಿತು. ಪರಂವಃ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿಬಂದಿದ್ದ ಈ ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತಿತ್ತು. ಐದು ಭಾಷೆಗಳಲ್ಲೂ ಜನರು ಈ ಸಿನಿಮಾ ಮೆಚ್ಚಿಕೊಂಡಿದ್ದರು. 777 ಚಾರ್ಲಿ ಒಟಿಟಿ ಹಾಗೂ ಥಿಯೇಟರ್ ಎರಡೂ ಸೇರಿಸಿ 150 ಕೋಟಿ ರೂ. ಕಲೆಕ್ಷನ್ ಮಾಡಿದೆ.
ವಿಕ್ರಾಂತ್ ರೋಣ: 777 ಚಾರ್ಲಿ ನಂತರ ಬಿಡುಗಡೆಯಾದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾವನ್ನು ಅನೂಪ್ ಭಂಡಾರಿ ಅವರು ನಿರ್ದೇಶನ ಮಾಡಿದ್ದರು. ಜುಲೈ 28ರಂದು ವಿಶ್ವದ್ಯಾಂತ ಬಿಡುಗಡೆ ಆದ ಈ ಚಿತ್ರದಲ್ಲಿ ಸುದೀಪ್ ಪೋಲಿಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದು, ಜಾಕ್ವೆಲಿನ್ ಫರ್ನಾಂಡಿಸ್ ಈ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಸಿನಿಮಾ 3ಡಿ ಹಾಗು 2ಡಿಯಲ್ಲಿ ರಿಲೀಸ್ ಆಗಿತ್ತು. ಪ್ರಪಂಚದಾದ್ಯಂತ 1,600ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆಕಂಡಿದ್ದ ವಿಕ್ರಾಂತ್ ರೋಣ ಒಟ್ಟು ಕಲೆಕ್ಷನ್ ಮಾಡಿದ್ದು 200 ಕೋಟಿ ರೂಪಾಯಿ.
ಕಾಂತಾರ: ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾ ಕಾಂತಾರ. ರಿಷಬ್ ಶೆಟ್ಟಿ ಅಭಿನಯಿಸಿ ನಿರ್ದೇಶನ ಮಾಡಿದ ಕರಾವಳಿ ಸಂಸ್ಕೃತಿಯ ಸಿನಿಮಾ. ಸಾಮಾನ್ಯವಾಗಿ ಪ್ಯಾನ್ ಇಂಡಿಯಾ ಅಂದರೆ ಬಹುಭಾಷೆಗಳಲ್ಲಿ ಒಟ್ಟಿಗೆ ತೆರಕಾಣುತ್ತದೆ. ಆದ್ರೆ ಈ ಚಿತ್ರ ಮಾತ್ರ ಮೊದಲು ಕನ್ನಡದಲ್ಲಿ ಬಿಡುಗಡೆಗೊಂಡು ಬಳಿಕ ತೆಲುಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆ ಆಯಿತು. ದೈವರಾಧನೆ ಕಥೆ ಒಳಗೊಂಡ ಕಾಂತಾರ ಸಿನಿಮಾ ನಿರೀಕ್ಷೆಗೂ ಮೀರಿ ಅದ್ಭುತ ಯಶಸ್ಸು ಗಳಿಸಿತು. 16 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಕಾಂತಾರ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆಯಿತು. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಪಕ ವಿಜಯ್ ಕಿರಂಗದೂರ್ ಈ ಚಿತ್ರ ನಿರ್ಮಿಸಿದ್ದಾರೆ.