ಹೊಸ ನಿರೀಕ್ಷೆಯೊಂದಿಗೆ ಹೊಸ ವರ್ಷಕ್ಕೆ ನಮ್ಮ ಸ್ಯಾಂಡಲ್ವುಡ್ ಸಜ್ಜಾಗಿದೆ. ಪ್ರತಿ ಹೊಸ ವರ್ಷಾರಂಭ ಗೆಲುವಿನ ಕಡೆ ಕಣ್ಣಾಡಿಸೋ ಮುನ್ನ, ಈ ವರ್ಷದಲ್ಲಿ ನಮ್ಮ ಸಾಧನೆ ಏನು ಎಂಬುದರ ಲೆಕ್ಕಾಚಾರ ಹಾಕೋದು ಕಾಮನ್. 2023 ಕೊನೆ ಹಂತಕ್ಕೆ ಬಂದಿದ್ದು, ಈ ವರ್ಷ ಎಷ್ಟು ಸಿನಿಮಾಗಳು ಬಿಡುಗಡೆ ಆಗಿವೆ. ಅಷ್ಟು ಚಿತ್ರಗಳ ಪೈಕಿ ಗೆದ್ದವರು ಯಾರು? ಹಿನ್ನೆಡೆ ಕಂಡವರು ಯಾರು? ಎಂಬುದನ್ನು ನೋಡೋಣ.
ಇನ್ನು 18 ದಿನಗಳು ಉರುಳಿದ್ರೆ 2023 ತೆರೆ ಮರೆಗೆ ಸರಿಯುತ್ತೆ. 2024 ಹೊಸ ಉಲ್ಲಾಸದೊಂದಿಗೆ ಉದಯಿಸುತ್ತದೆ. ಸ್ಯಾಂಡಲ್ವುಡ್ ಪಾಲಿಗೆ 2023 ಮಿಶ್ರ ಅನುಭವ ನೀಡಿದೆ. ಈ ವರ್ಷ 200ಕ್ಕೂ ಹೆಚ್ಚು ಕನ್ನಡ ಚಿತ್ರಗಳು ರಿಲೀಸ್ ಆಗಿವೆ. ಅಲ್ಲದೇ ಬಾಕಿ ಇರುವ 18 ದಿನಗಳಲ್ಲಿ 25ಕ್ಕೂ ಹೆಚ್ಚು ಚಿತ್ರಗಳು ರಿಲೀಸ್ ಆಗೋ ಸಾಧ್ಯತೆಗಳಿವೆ.
ಈಗಾಗಲೇ ಕನ್ನಡದ 200ಕ್ಕೂ ಹೆಚ್ಚು ಚಿತ್ರಗಳು ರಿಲೀಸ್ ಆಗಿವೆ. ಆದರೆ, ಈ ಚಿತ್ರಗಳಲ್ಲಿ ಎಷ್ಟು ಸಿನಿಮಾಗಳು ಗೆದ್ದಿವೆ? ಎಷ್ಟು ಸಿನಿಮಾಗಳು ಬಿದ್ದಿವೆ? ಎಂಬುದನ್ನು ಲೆಕ್ಕಾಚಾರ ಹಾಕೊಕೆ ಹೋದ್ರೆ ನಮಗೆ ನಿರಾಸೆ ಆಗೋದು ಗ್ಯಾರಂಟಿ. ಯಾಕಂದ್ರೆ ಈ ವರ್ಷ ನಮ್ಮ ಕನ್ನಡ ಸಿನಿಮಾಗಳ ಗೆದ್ದ ಸಂಖ್ಯೆ ಬೆರಳೆಣಿಕೆಯಷ್ಟಿದ್ರೆ, ದೊಡ್ಡ ಮಟ್ಟಿಗೆ ಸದ್ದು ಮಾಡದ ಸಿನಿಮಾಗಳ ಸಂಖ್ಯೆ ಬೆಟ್ಟದಂತಿದೆ. ಕಳೆದ ವರ್ಷದ ಕೊನೆಯಲ್ಲಿ ಬಂದ ಕಾಂತಾರ ಹಾಗೂ ಚಾರ್ಲಿ 777 ಸ್ಯಾಂಡಲ್ವುಡ್ ಇಂಡಸ್ಟ್ರಿಗೆ ಹೊಸ ಹುರುಪು ಕೊಟ್ಟಿದ್ದವು. ಅಲ್ಲದೇ, 2022ರಲ್ಲಿ ಕನ್ನಡ ಚಿತ್ರಗಳು 2,000 ಕೋಟಿಗೂ ಹೆಚ್ಚು ವ್ಯವಹಾರ ನಡೆಸಿದ್ದವು. ಅಲ್ಲದೇ 2023ನ್ನು ಅದ್ಧೂರಿಯಾಗಿ ಸ್ವಾಗತಿಸುವಂತೆ ಮಾಡಿದ್ವು. ಆದರೆ 2023ರ ಆರಂಭದಿಂದಲೇ ಸ್ಯಾಂಡಲ್ವುಡ್ ನಿರೀಕ್ಷಿತ ಮಟ್ಟಿಗೆ ಸದ್ದು ಮಾಡಿಲ್ಲ.
ಡಾರ್ಲಿಂಗ್ ಕೃಷ್ಣ ಅಭಿನಯದ 'ಮಿಸ್ಟರ್ ಬ್ಯಾಚುಲರ್' ಮೂಲಕ ಹೊಸ ವರ್ಷವನ್ನು ಆರಂಭಿಸಲಾಯಿತು. ಆದರೆ ಲವ್ ಮಾಕ್ಟೈಲ್ ಚಿತ್ರದ ಯಶಸ್ಸಿನಲ್ಲಿದ್ದ ಡಾರ್ಲಿಂಗ್ ಕೃಷ್ಣನಿಗೆ ಈ ಚಿತ್ರ ಸೋಲಿನ ರುಚಿ ತೋರಿಸಿತ್ತು. ಈ ಚಿತ್ರದ ಬಳಿಕ ಬಂದ ಸಿನಿಮಾ ಕ್ರಾಂತಿ. ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಮೇಲಿನ ನಿರೀಕ್ಷೆ ಮೌಂಟ್ ಎವರೆಸ್ಟ್ ಎತ್ತರಕ್ಕೆ ಇತ್ತು. ಅದ್ರೆ ಈ ಚಿತ್ರ ಕೂಡ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ.
ಇನ್ನೂ ಅದ್ಧೂರಿ ಮೇಕಿಂಗ್ ಹಾಗೂ ಟ್ರೇಲರ್ನಿಂದಲೇ ಭಾರತೀಯ ಚಿತ್ರರಂಗ ಮತ್ತೆ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವಂತೆ ಮಾಡಿದ ಸಿನಿಮಾ ಕಬ್ಜ. ಆರ್. ಚಂದ್ರು ನಿರ್ದೇಶನದ, ಉಪ್ಪಿ ನಟನೆಯ ಕಬ್ಜ ಕಮರ್ಷಿಯಲ್ ಆಗಿ ಹಿಟ್ ಆಯ್ತು. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಾನದಾರಿಯಲ್ಲಿ ಚಿತ್ರ ಗೆಲುವಿನ ದಾರಿ ಬಿಟ್ಟು ಸೋಲಿನ ಸುಳಿಯಲ್ಲಿ ಸಿಕ್ಕಿ ಇಂಡಸ್ಟ್ರಿ ಕಂಗಾಲಾಗುವಂತೆ ಮಾಡಿತ್ತು.
ಇದಲ್ಲದೇ ಡಾಲಿ ನಟನೆಯ ಹೊಯ್ಸಳ ಚಿತ್ರ ಕೂಡ 2023ರಲ್ಲಿ ದೊಡ್ಡ ಗೆಲುವಿನ ಭರವಸೆ ಮೂಡಿಸಿತ್ತು. ಆದರೆ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿ ಹೊಯ್ಸಳ ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಪ್ರದರ್ಶನ ನೀಡಿತು. ಮಾಸ್ ಮಾದೇವ ರಾಜ್ ಬಿ ಶೆಟ್ಟಿ ಅಭಿನಯದ ಟೋಬಿ ಒಂದು ಮಟ್ಟಿನ ಗೆಲುವು ಕಂಡಿತು. ಕೊಂಚ ಹಿನ್ನೆಡೆ ಕಂಡಿದ್ದ ಚಂದನವನಕ್ಕೆ ಹೊಂಬಾಳೆ ಫಿಲ್ಮ್ಸ್ನ, ಜಗ್ಗೇಶ್ ಅಭಿನಯದ 'ರಾಘವೇಂದ್ರ ಸ್ಟೋರ್ಸ್' ಆಕ್ಸಿಜನ್ ಆಗುತ್ತೆ ಅನ್ನೋ ಭರವಸೆ ಇತ್ತು. ಅದರೆ ಆ ಭರವಸೆಯೂ ಹುಸಿಯಾಯ್ತು. ಸಿನಿಮಾ ಗೆದ್ದಿತಾದರೂ ದೊಡ್ಡ ಮಟ್ಟಿಗೆ ಸದ್ದು ಮಾಡಲಿಲ್ಲ. ಈ ಸಿನಿಮಾಗಳ ಪೈಕಿ ಹಲವು ಚಿತ್ರಗಳಿಗೆ ಹಾಕಿದ ಬಂಡವಾಳ ವಾಪಸ್ ಬಂದಿತಾದರೂ ದೊಡ್ಡ ಮಟ್ಟಿಗೆ ಜನಪ್ರಿಯವಾಗಲಿಲ್ಲ. ಇನ್ನು ಕೆಲವು ಜನಪ್ರಿಯವಾದರೂ ಹಾಕಿದ ಬಂಡವಾಳ ವಾಪಸ್ ಬರಲಿಲ್ಲ.