ಜುಲೈ 24, ಕರುನಾಡು ಕಂಡ ಹೆಮ್ಮೆಯ ಹಾಸ್ಯ ನಟ ದಿವಂಗತ ಟಿ.ಆರ್ ನರಸಿಂಹರಾಜು ಅವರ ಹುಟ್ಟುಹಬ್ಬ. ಈ ಬಾರಿಯ ವಿಶೇಷವೆಂದರೆ, ಇದು ನರಸಿಂಹರಾಜು ಅವರ ನೂರನೇ ಹುಟ್ಟುಹಬ್ಬ. ಈ ಸಂಭ್ರಮವನ್ನು 'ಶತಮಾನಕ್ಕೊಬ್ಬ ಹಾಸ್ಯಚಕ್ರವರ್ತಿಯ ಶತಮಾನೋತ್ಸವ' ಎಂಬ ಹೆಸರಿನಲ್ಲಿ ಆಚರಿಸಲಾಯಿತು. ರವೀಂದ್ರ ಕಲಾಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನರಸಿಂಹರಾಜು ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಹಮ್ಮಿಕೊಂಡಿದ್ದರು.
ಈ ಸಂಧರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ. ಮ. ಹರೀಶ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ ಆರ್ ಕೆ ವಿಶ್ವನಾಥ್, ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ ಎನ್ ಸುಬ್ರಹ್ಮಣ್ಯ ಹಾಗೂ ಹಿರಿಯ ನಟ ಬೆಂಗಳೂರು ನಾಗೇಶ್ ಸೇರಿದಂತೆ ವಿವಿಧ ಗಣ್ಯರು ಜನ್ಮ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು.
ಬಳಿಕ ನರಸಿಂಹರಾಜು ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು. ನರಸಿಂಹರಾಜು ಅವರ ಶತಮಾನೋತ್ಸವ ಸಮಾರಂಭ ಬರೀ ಕುಟುಂಬದವರದ್ದಲ್ಲ. ಎಲ್ಲರೂ ಸೇರಿ ಮಾಡಬೇಕಾದ ಕಾರ್ಯಕ್ರಮ ಎಂದು ಆಗಮಿಸಿದ್ದ ಎಲ್ಲಾ ಗಣ್ಯರು ತಿಳಿಸಿದರು. ನರಸಿಂಹರಾಜು ಅವರ ಮೊಮ್ಮಕ್ಕಳಾದ ಅರವಿಂದ್ ಹಾಗೂ ಅವಿನಾಶ್ ಸಹ ಕಾರ್ಯಕ್ರಮಲ್ಲಿ ಉಪಸ್ಥಿತರಿದ್ದರು.
ನರಸಿಂಹರಾಜು ಅವರ ನೂರನೇ ಹುಟ್ಟುಹಬ್ಬವನ್ನು 'ಶತಮಾನಕ್ಕೊಬ್ಬ ಹಾಸ್ಯಚಕ್ರವರ್ತಿಯ ಶತಮಾನೋತ್ಸವ' ಎಂಬ ಹೆಸರಿನಿಂದ ವರ್ಷಪೂರ್ತಿ ಆಚರಿಸಲಾಗುವುದು ಎಂದು ನಿರ್ಧರಿಸಲಾಗಿದೆ. ನರಸಿಂಹರಾಜು ಅವರ ಹೆಸರಿನಲ್ಲಿ ಮೂರು ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿದೆ. ದೊಡ್ಡಮಟ್ಟದ ಸಮಾರಂಭ ಆಯೋಜಿಸಿ ಈ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.