ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಛಾಪು ಮೂಡಿಸಿರೋ ನಟ ಅನಂತ್ ನಾಗ್. ಸಿನಿಮಾ ರಂಗಕ್ಕೆ ಅನಂತ್ ನಾಗ್ ಅವರ ಕೊಡುಗೆ ಅಪಾರ ಅವರ ನಟನೆಗೆ ಸಾಕಷ್ಟು ಪ್ರಶಸ್ತಿಗಳು ಕೂಡ ಲಭ್ಯವಾಗಿದೆ. ಈಗ ಅವರ ಸಾಧನೆಗೆ ಮತ್ತೊಂದು ಗೌರವ ಸಿಕ್ಕಿದೆ.
ಹೌದು, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯವು ಹಿರಿಯ ನಟ ಅನಂತ್ ನಾಗ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಈ ಕಾರ್ಯಕ್ರಮ ರೇಸ್ ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದಲ್ಲಿ ನಡೆಯಿತು. ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಮತ್ತು ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ ಹರೀಶ್ ಸಮ್ಮುಖದಲ್ಲಿ ಹಿರಿಯ ನಟ ಅನಂತ್ ನಾಗ್ ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು. ಪತ್ನಿ ಗಾಯಿತ್ರಿ , ಮಗಳು ಅದಿತಿ, ಅಳಿಯ ವಿವೇಕ್ ಸಮ್ಮುಖದಲ್ಲಿ ಅನಂತ್ ನಾಗ್ ಈ ಗೌರವವನ್ನು ಸ್ವೀಕರಿಸಿದರು.