ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ ನೂರಾರು ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಈ ವರ್ಷ ಕೂಡ ಇದಕ್ಕೆ ಹೊರತಾಗಿಲ್ಲ. 2023 ಕೊನೆಗೊಳ್ಳುವುದಕ್ಕೆ ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಚಂದನವನದಲ್ಲಿ 200ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆ ಆಗಿವೆ. ಇವುಗಳಲ್ಲಿ ಕೆಲ ನಟಿಮಣಿಯರು ತಮ್ಮ ಅಭಿನಯ ಹಾಗೂ ಗ್ಲ್ಯಾಮರ್ನಿಂದ ಕನ್ನಡಿಗರ ಹೃದಯ ಕದ್ದಿದ್ದಾರೆ.
2023ನೇ ವರ್ಷದ ಆರಂಭದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬಂದ ಚಿತ್ರ 'ಹೊಂದಿಸಿ ಬರೆಯಿಸಿ'. ಗುಳ್ಟು ಚಿತ್ರದ ಖ್ಯಾತಿಯ ನವೀನ್ ಶಂಕರ್, ಪ್ರವೀಣ್ ತೇಜ್, ಶ್ರೀ, ,ಐಶಾನಿ ಶೆಟ್ಟಿ, ಅರ್ಚನಾ ಜೋಯಿಸ್, ಭಾವನಾ ರಾವ್, ಅರ್ಚನಾ ಕೊಟ್ಟಿಗೆ ಅಭಿನಯಿಸಿದ ಯೂತ್ ಕಾಲೇಜ್ ಸ್ಟೋರಿಯಿದು. ಪ್ರತಿಯೊಬ್ಬರ ಬದುಕಿನಲ್ಲಿ ಕಾಲೇಜು ಅನ್ನೋದು ಬಹುಮುಖ್ಯವಾದ ಭಾಗ. ಅಲ್ಲಿ ಒಂದಷ್ಟು ಹೊಸ ವ್ಯಕ್ತಿಗಳು, ಹೊಸ ಗುರಿ, ಉದ್ದೇಶ, ಕನಸು ಎಲ್ಲವೂ ಜೊತೆಯಾಗುತ್ತವೆ. ಆ ಕಾಲಘಟ್ಟದಲ್ಲಿ ಒಂದಷ್ಟು ಕಳೆದುಕೊಳ್ಳುವುದು, ಮತ್ತೊಂದಷ್ಟು ಸೇರಿಕೊಳ್ಳುವುದು ಆಗುತ್ತದೆ.
ಅಂತಹ ಕಾಲೇಜು ಮತ್ತು ಅದರ ನಂತರದ ಬದುಕಿನ ಕಥೆ ಒಳಗೊಂಡಿದ್ದ 'ಹೊಂದಿಸಿ ಬರೆಯಿರಿ' ಚಿತ್ರ ಸಿನಿಮಾ ಪ್ರೇಮಿಗಳಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಈ ಸಿನಿಮಾವನ್ನು ರಾಮೇನಹಳ್ಳಿ ಜಗನ್ನಾಥ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಹೆಚ್ಚು ಗಮನ ಸೆಳೆದ ಪಾತ್ರ ಅಂದ್ರೆ ಅರ್ಚನಾ ಜೋಯಿಸ್ ಅವರದ್ದು. ಗರ್ಭೀಣಿಯಾದ ಅರ್ಚನಾ ಗಂಡನನ್ನು ಕಳೆದುಕೊಂಡ ಪಾತ್ರದಲ್ಲಿ ಕನ್ನಡಿಗರ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗಿದ್ದರು. ಈ ಚಿತ್ರದಲ್ಲಿ ಅರ್ಚನಾ ಜೋಯಿಸ್ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇತ್ತು ಅಂದ್ರೆ ತಪ್ಪಿಲ್ಲ.
ಇನ್ನು ಡಾಲಿ ಧನಂಜಯ್ ನಿರ್ಮಾಣದ ಉಮೇಶ್ ಕೆ.ಕೃಪ ನಿರ್ದೇಶನದಲ್ಲಿ ಮೂಡಿ ಬಂದ ಈ ವರ್ಷದ ಹಿಟ್ ಸಿನಿಮಾ 'ಟಗರು ಪಲ್ಯ'. ಹಾಸ್ಯ ನಟ ನಾಗಭೂಷಣ್ ಹಾಗೂ ಅಮೃತಾ ಪ್ರೇಮ್ ಅಭಿನಯಿಸಿದ ಟಗರು ಪಲ್ಯ ಈ ವರ್ಷದ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ. ಚೊಚ್ಚಲ ಚಿತ್ರದಲ್ಲಿ ನೆನೆಪಿರಲಿ ಪ್ರೇಮ್ ಮಗಳು ಅಮೃತಾ ಕನ್ನಡಿಗರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಕಾ ಮಂಡ್ಯ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ ಅಮೃತಾ ಪ್ರೇಮ್ ಮೊದಲ ಚಿತ್ರದಲ್ಲಿ ಸಕ್ಸಸ್ ಕಂಡಿದ್ದಾರೆ.
ಈ ಮಧ್ಯೆ ಗಣೇಶ್ ಹಾಗೂ ರಕ್ಷಿತ್ ಶೆಟ್ಟಿ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದ ರುಕ್ಮಿಣಿ ವಸಂತ್ಗೆ 2023 ಲಕ್ಕಿ ಇಯರ್. ಏಕೆಂದರೆ ಇಬ್ಬರು ಸ್ಟಾರ್ ನಟರ ಜೊತೆ ಅಭಿನಯಿಸಿದ ರುಕ್ಮಿಣಿ ವಸಂತ್ ಅವರ ಎರಡು ಚಿತ್ರದ ಪಾತ್ರಗಳು ಬಹಳ ವಿಭಿನ್ನವಾಗಿದ್ದವು. ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಸೈಡ್ 1 ಹಾಗೂ ಸೈಡ್ ಬಿಯಲ್ಲಿನ ಇವರ ಅಭಿನಯ ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಮಾಡಿತ್ತು.