ಕರ್ನಾಟಕ

karnataka

ETV Bharat / entertainment

ಕಾವೇರಿ ಹೋರಾಟಕ್ಕೆ ಸ್ಯಾಂಡಲ್​ವುಡ್​ ಬೆಂಬಲ: ಸುದೀಪ್, ದರ್ಶನ್, ಶಿವಣ್ಣ ಹೇಳಿದ್ದೇನು? - ಈಟಿವಿ ಭಾರತ ಕನ್ನಡ

ಸ್ಯಾಂಡಲ್​ವುಡ್​ ನಟರು ಸೋಷಿಯಲ್​ ಮೀಡಿಯಾ ಮೂಲಕ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

Sandalwood stars show support for cauvery protest
ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ ಸ್ಯಾಂಡಲ್​ವುಡ್​ ನಟರು

By ETV Bharat Karnataka Team

Published : Sep 21, 2023, 10:30 AM IST

ರಾಜ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದೆ. ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ, ರೈತರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅನ್ನದಾತರ ಹೋರಾಟಕ್ಕೆ ಬೆಂಬಲ ಸೂಚಿಸಿಲ್ಲ ಎಂದು ಚಿತ್ರರಂಗದವರ ವಿರುದ್ಧ ರೈತರು ವಾಗ್ದಾಳಿ ನಡೆಸಿದ್ದರು. ಇದೀಗ ಎಚ್ಚೆತ್ತ ಸ್ಯಾಂಡಲ್​ವುಡ್​ ನಟರು ಸೋಷಿಯಲ್​ ಮೀಡಿಯಾದ ಮೂಲಕ ಕಾವೇರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಟರಾದ ಕಿಚ್ಚ ಸುದೀಪ್​, ಚಾಲೆಂಜಿಂಗ್​ ಸ್ಟಾರ್​ ದರ್ಶನ್​, ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​, ಡಾಲಿ ಧನಂಜಯ್​, ರಿಷಬ್​ ಶೆಟ್ಟಿ, ಉಪೇಂದ್ರ ಸೇರಿದಂತೆ ಅನೇಕರು ರೈತರ ಪರ ನಿಂತಿದ್ದಾರೆ.

"ನಮ್ಮ ಕಾವೇರಿ ನಮ್ಮ ಹಕ್ಕು. ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು ನಾನು ನಂಬಿದ್ದೇನೆ. ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ. ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ. ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ" - ಕಿಚ್ಚ ಸುದೀಪ್​

"ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ" - ಚಾಲೆಂಜಿಂಗ್​ ಸ್ಟಾರ್​ ದರ್ಶನ್​

"ಮಳೆಯ ಅಭಾವದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕಾವೇರಿ ಕೃಷ್ಣ ನದಿಗಳ ಹೋರಾಟ ನಮ್ಮ ಎಲ್ಲರ ಕರ್ತವ್ಯ. ನಮ್ಮ ರೈತರಿಗೆ ಸಿಗಬೇಕಾದ ಪಾಲು ಸಿಗಲೇಬೇಕು. ನಮ್ಮ ಹಕ್ಕಿಗಾಗಿ ಸದಾ ಹೋರಾಡೋಣ.ಕಾವೇರಿ ಸಂಘರ್ಷ ಬೇಗ ಅಂತ್ಯವಾಗಲಿ." - ನಟ ಡಾಲಿ ಧನಂಜಯ್​

"ರೈತ ದೇಶದ ಬೆನ್ನೆಲುಬು ಅಂತಾರೆ. ಆ ರೈತನ ಬೆನ್ನೆಲುಬು ನಮ್ಮ ಕಾವೇರಿ. ರಾಜ್ಯದಲ್ಲಿ ಈ ಸಾರಿ ಮಳೆಯ ಅಭಾವವಿದು ರೈತ ಆಗಲೇ ಸಂಕಷ್ಟದಲ್ಲಿದ್ದಾನೆ. ಎರಡು ರಾಜ್ಯದ ನಾಯಕರು ಹಾಗು ನ್ಯಾಯಾಲಯ ಎಲ್ಲ ಅಂಶಗಳನ್ನು ಪರಿಶೀಲಿಸಿ ಒಂದು ಸಮಾಧಾನಕರ ಪರಿಹಾರ ಕಂಡುಕೊಳ್ಳಬೇಕು ಅನ್ನೋದು ನನ್ನ ಪ್ರಾರ್ಥನೆ." - ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​

"ಈ ವರ್ಷ ಮಳೆಯ ಅಭಾವದಿಂದ ನಾಡು ಬರಪೀಡಿತವಾಗಿದೆ. ಈ ಸಂದರ್ಭದಲ್ಲಿ ನಮ್ಮ ರೈತರ ಜೊತೆ ನಿಲ್ಲುವುದು ಎಲ್ಲರ ಜವಾಬ್ದಾರಿ. ಸರ್ಕಾರಗಳು ಕಾವೇರಿ ವಿಚಾರದಲ್ಲಿ ಆದಷ್ಟು ಬೇಗ ನ್ಯಾಯಯುತ ನಿರ್ಣಯಕ್ಕೆ ಬರಲಿ. ರೈತರಿಗೆ ನ್ಯಾಯ ಸಿಗಲಿ." - ನಟ ರಿಷಬ್​ ಶೆಟ್ಟಿ

"ಈಗಾಗಲೇ ಸರಿಯಾಗಿ ಮಳೆಯಾಗದೇ ನೀರಿನ ಅಭಾವ ಸಾಕಷ್ಟು ಇರುವುದರಿಂದ ಕಾವೇರಿ ನೀರಿನ ಹಂಚಿಕೆಯ ವಿಷಯದಲ್ಲಿ ನಮ್ಮ ರೈತಾಪಿ ಬಾಂಧವರಿಗೆ ಸಮಸ್ಯೆ ಆಗದಂತೆ ತಜ್ಞರು ನಿರ್ಣಯ ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ. ನಮ್ಮ ರೈತರ ನೀರಿನ ಸಮಸ್ಯೆಗೆ ಒಂದು ಶಾಶ್ವತ ಪರಿಹಾರವನ್ನೂ ಆದಷ್ಟು ಬೇಗ ತಜ್ಞರು ಹುಡುಕಿ ಕಾರ್ಯರೂಪಕ್ಕೆ ತರಲಿ ಎಂದು ಆಶಿಸೋಣ" - ನಟ ಉಪೇಂದ್ರ

ಇದನ್ನೂ ಓದಿ:ಮಂಡ್ಯದಲ್ಲಿ ಮುಂದುವರೆದ ಕಾವೇರಿ ಹೋರಾಟ: ಸ್ಯಾಂಡಲ್​ವುಡ್​ ನಟರ ವಿರುದ್ಧ ರೈತರ ಆಕ್ರೋಶ

ABOUT THE AUTHOR

...view details