ಕರ್ನಾಟಕ

karnataka

ETV Bharat / entertainment

2022ರಲ್ಲಿ ಇಹಲೋಕ ತ್ಯಜಿಸಿದ ಕನ್ನಡ ಚಿತ್ರರಂಗದ ತಾರೆಯರಿವರು..

ಸ್ಯಾಂಡಲ್​ವುಡ್​​ ಚಿತ್ರರಂಗದಲ್ಲಿ ಕೆಲ ತಾರೆಯರು ಬದುಕಿನ ಪಯಣ ಮುಗಿಸಿದ್ದು ನೋವಿನ ಸಂಗತಿ. ಅವರನ್ನಿಂದು ಸ್ಮರಿಸೋಣ.

sandalwood actors death
ಇಹಲೋಕ ತ್ಯಜಿಸಿದ ಕಲಾವಿದರು

By

Published : Dec 23, 2022, 5:00 AM IST

2022ನೇ ವರ್ಷ ಕನ್ನಡ ಚಿತ್ರರಂಗದಲ್ಲಿ ಸಿಹಿ ಮತ್ತು ಕಹಿ ಎರಡೂ ಘಟನೆಗಳಿಗೆ ಸಾಕ್ಷಿ ಆಗಿದೆ. ಕನ್ನಡ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಕಾಣುವ ಮೂಲಕ ಬಾಕ್ಸ್ ಆಫೀಸ್​ನಲ್ಲಿ ದಾಖಲೆ ಬರೆದಿವೆ ಅನ್ನೋದು ಹೆಮ್ಮೆಯ ವಿಷಯ ಆದರೆ ಇದೇ ವರ್ಷ ಕನ್ನಡ ಚಿತ್ರರಂಗದ ಕೆಲ ತಾರೆಯರು ಬದುಕಿನ ಪಯಣ ಮುಗಿಸಿದ್ದು ನೋವಿನ ಸಂಗತಿ.

ಅಶೋಕ್ ರಾವ್: ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅಶೋಕ್ ರಾವ್ ಫೆಬ್ರವರಿ 02ರಂದು ನಿಧನ ಹೊಂದಿದರು. ಡಾ.ರಾಜ್‌ಕುಮಾರ್, ಶಂಕರ್ ನಾಗ್, ಅಂಬರೀಷ್ ಸೇರಿದಂತೆ ಹಲವು ದಿಗ್ಗಜರ ಸಿನಿಮಾಗಳಲ್ಲಿ ಖಳ ನಟನಾಗಿ ಮಿಂಚಿದವರು. ಅದರಲ್ಲಿ ಡಾ. ರಾಜ್‌ಕುಮಾರ್ ಅವರ ಪರುಶುರಾಮ ಚಿತ್ರದಲ್ಲಿ ಅಶೋಕ್ ರಾವ್ ಖಡಕ್ ವಿಲನ್ ಆಗಿ ಅಭಿನಯಿಸಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಬಾ ನಲ್ಲೆ ಮಧು ಚಂದ್ರಕೆ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದ್ದರು.

ಇಹಲೋಕ ತ್ಯಜಿಸಿದ ಕಲಾವಿದರು

ಭಾರ್ಗವಿ ನಾರಾಯಣ್: ರಂಗಭೂಮಿ, ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ತನ್ನದೇ ಛಾಪು ಮೂಡಿಸಿದ್ದ ಹಿರಿಯ ನಟಿ ಭಾರ್ಗವಿ ನಾರಾಯಣ್ ಕೂಡ ಫೆಬ್ರವರಿ 14 ರಂದು ಇಹಲೋಕ ತ್ಯಜಿಸಿದರು. ಕನ್ನಡದ ಪ್ರಸಿದ್ಧ ನಟ ಪ್ರಕಾಶ್ ಬೆಳವಾಡಿ ಮತ್ತು ಸುಧಾ ಬೆಳವಾಡಿ ತಾಯಿ ಭಾರ್ಗವಿ ನಾರಾಯಣ್ ವಯೋಸಹಜ ಆರೋಗ್ಯ ಸಮಸ್ಯೆಯಿಂದ ನಿಧನರಾದರು. ಭಾರ್ಗವಿ ನಾರಾಯಣ್ ಅವರು 60ರ ದಶಕದಲ್ಲೇ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಪ್ರೊ. ಹುಚ್ಚುರಾಯ ಚಿತ್ರದಲ್ಲಿನ ಭಾರ್ಗವಿ ಅವರ ನಟನೆಗೆ 1974-75ರ ಸಾಲಿನ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಇವರು ಬಾ ನಲ್ಲೆ ಮಧುಚಂದ್ರಕೆ, ಎರಡು ಕನಸು, ಪಲ್ಲವಿ ಅನುಪಲ್ಲವಿ, ಜಂಬೂ ಸವಾರಿ, ಇದೊಳ್ಳೆ ರಾಮಾಯಣ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ರಾಜಕುಮಾರ ಚಿತ್ರದಲ್ಲಿ ಭಾರ್ಗವಿ ನಾರಾಯಣ್ ವಿಶೇಷ ಪಾತ್ರದ ಮೂಲಕ ಗಮನ ಸೆಳೆದಿದ್ದರು.

ಇಹಲೋಕ ತ್ಯಜಿಸಿದ ಕಲಾವಿದರು

ಸಮನ್ವಿ: ವರ್ಷದ ಆರಂಭದಲ್ಲಿ ಸಂಭವಿಸಿದ ಬಾಲ ಕಲಾವಿದೆ ಸಮನ್ವಿ ಸಾವು ಚಿತ್ರರಂಗಕ್ಕೆ ದೊಡ್ಡ ಆಘಾತ ಉಂಟು ಮಾಡಿತ್ತು. ನಮ್ಮಮ್ಮ ಸೂಪರ್ ಸ್ಟಾರ್ ಖ್ಯಾತಿಯ ಬಾಲನಟಿ ಸಮನ್ವಿ ವಾಹನ ಅಪಘಾತದಲ್ಲಿ ನಿಧನ ಹೊಂದಿದರು. ಕಿರುತೆರೆ ನಟಿ ಅಮೃತಾ ನಾಯ್ಡು ಮಗಳು ಸಮನ್ವಿ ಚಿಕ್ಕ ವಯಸ್ಸಿನಲ್ಲಿಯೇ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಕಿರುತೆರೆ ವೀಕ್ಷಕರ ಮೆಚ್ಚುಗೆ ಗಳಿಸಿದ್ದರು. ಅದೇ ರಿಯಾಲಿಟಿ ಶೋ ಮುಗಿಸಿ ಮನಗೆ ಬರುವಾಗ ಬೈಕ್ ಅಪಘಾತ ಸಂಭವಿಸಿ ಇಹಲೋಕ ತ್ಯಜಿಸಿದರು.

ರಾಜೇಶ್: ಕನ್ನಡ ಚಿತ್ರರಂಗದಲ್ಲಿ ಕಲಾತಪಸ್ವಿ ಅಂತಾ ಕರೆಸಿಕೊಂಡಿದ್ದ ಹಿರಿಯ ನಟ ರಾಜೇಶ್ ಫೆಬ್ರವರಿ 19ರ ಮುಂಜಾನೆ ನಿಧನ ಹೊಂದಿದರು. ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮಾವ ಆಗಿದ್ದ ರಾಜೇಶ್ ಕನ್ನಡದ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ರಾಜೇಶ್ ಅವರನ್ನು ವೀರ ಸಂಕಲ್ಪ ಸಿನಿಮಾದ ಮೂಲಕ ಹುಣಸೂರು ಕೃಷ್ಣಮೂರ್ತಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ದೇವರ ಗುಡಿ, ಸೊಸೆ ತಂದ ಸೌಭಾಗ್ಯ, ಬಿಡುಗಡೆ, ದೇವರದುಡ್ಡು, ಕಲಿಯುಗ, ಪಿತಾಮಹ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ರಾಜೇಶ್​ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು.

ಇಹಲೋಕ ತ್ಯಜಿಸಿದ ಕಲಾವಿದರು

ಮೋಹನ್ ಜುನೇಜ: ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ಮೋಹನ್ ಜುನೇಜ ಮೇ 07ರಂದು ನಿಧನ ಹೊಂದಿದರು. ಚೆಲ್ಲಾಟ, ಕೆಜಿಎಫ್​, ಜೋಗಿ ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳಲ್ಲಿ ಮೋಹನ್​ ಜುನೇಜ ನಟಿಸಿದ್ದರು. ಪರಭಾಷೆಯ ಚಿತ್ರಗಳಲ್ಲೂ ಕೂಡ ಬಣ್ಣ ಹಚ್ಚಿದ್ದರು. ಅನೇಕ ಧಾರವಾಹಿಗಳಲ್ಲಿ ಮೋಹನ್ ಜುನೇಜ ಅಭಿನಯಿಸಿದ್ದರು.

ಸತ್ಯ ಉಮ್ಮತ್ತಾಲ್: ಖ್ಯಾತ ಸಂಗೀತ ನಿರ್ದೇಶಕ ಯೋಗರಾಜ್ ಭಟ್ ಅವರ ಮಾವ ಹಾಗು ನಟರಾಗಿದ್ದ ಸತ್ಯ ಉಮ್ಮತ್ತಾಲ್ ಅವರು ಜೂನ್ 04 ರಂದು ನಿಧನರಾದರು. ಯೋಗರಾಜ್ ಭಟ್ಟರ ಶಿಷ್ಯರಲ್ಲಿ ಒಬ್ಬರಾದ ಪವನ್ ಕುಮಾರ್ ನಿರ್ದೇಶಿಸಿದ ಮೊದಲ ಸಿನಿಮಾ ಲೈಫು ಇಷ್ಟೇನೆ ಸಿನಿಮಾ ಮೂಲಕ ನಟನೆ ಆರಂಭಿಸಿದ್ದ ಸತ್ಯ ಉಮ್ಮತ್ತಾಲ್, ಆ ನಂತರ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ದನ ಕಾಯೋನು, ಕಡ್ಡಿಪುಡಿ, ಕೆಂಡ ಸಂಪಿಗೆ, ಜಯಮ್ಮನ ಮಗ ಸೇರಿದಂತೆ ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ಸತ್ಯ ಉಮ್ಮತ್ತಾಲ್ ನಟಿಸಿದ್ದಾರೆ.

ಸುಬ್ಬಣ್ಣ:ಇನ್ನು ರಾಷ್ಟ್ರಪ್ರಶಸ್ತಿ ವಿಜೇತ ಗಾಯಕ ಶಿವಮೊಗ್ಗ ಸುಬ್ಬಣ್ಣ ಆಗಸ್ಟ್ 12 ರಂದು ಅನಾರೋಗ್ಯ ಹಿನ್ನೆಲೆ ನಿಧನ ಹೊಂದಿದರು. ಸಂಗೀತ ಕ್ಷೇತ್ರದಲ್ಲಿ ಸುಬ್ಬಣ್ಣನವರದ್ದು ದೊಡ್ಡ ಹೆಸರು. ಕಾಡು ಕುದುರೆ ಸಿನಿಮಾಕ್ಕಾಗಿ ಶಿವಮೊಗ್ಗ ಸುಬ್ಬಣ್ಣ ಹಾಡಿದ 'ಕಾಡು ಕುದುರೆ ಓಡಿ ಬಂದಿತ್ತ' ಹಾಡಿಗೆ ರಾಷ್ಟ್ರಪ್ರಶಸ್ತಿ ಸಹ ಲಭಿಸಿತ್ತು.

ಮಂಡ್ಯ ರವಿ: ಕಿರುತೆರೆ ಹಾಗೂ ಹಿರಿತೆರೆ ನಟ ಮಂಡ್ಯ ರವಿ ಸೆಪ್ಟೆಂಬರ್ 14 ರಂದು ನಿಧನ ಹೊಂದಿದರು. ಲಿವರ್​ ಸಿರೋಸಿಸ್ ಖಾಯಿಲೆಯಿಂದ ಅವರು ಬಳಲುತ್ತಿದ್ದರು. ಮಂಡ್ಯ ರವಿ, ಟಿ.ಎನ್ ಸೀತಾರಾಮ್ ನಿರ್ದೇಶನದ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಜೊತೆಗೆ ಹಲವು ಸಿನಿಮಾಗಳಲ್ಲಿಯೂ ಮಂಡ್ಯ ರವಿ ಪೋಷಕ ನಟರಾಗಿ ಕಾಣಿಸಿಕೊಂಡಿದ್ದರು.

ಲೋಹಿತಾಶ್ವ:ಹಿರಿಯ ನಟ ಲೋಹಿತಾಶ್ವ ನವೆಂಬರ್ 08ರಂದು ಇಹಲೋಕ ತ್ಯಜಿಸಿದರು. ಸುಮಾರು 500ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಲೋಹಿತಾಶ್ವ ನಟಿಸಿದ್ದರು. ಸಿನಿಮಾ ಮಾತ್ರವಲ್ಲದೇ ರಂಗಭೂಮಿ, ಧಾರಾವಾಹಿಗಳಲ್ಲಿಯೂ ಲೋಹಿತಾಶ್ವರದ್ದು ದೊಡ್ಡ ಹೆಸರು. ಬರೋಬ್ಬರಿ 49 ಬಾರಿ ಮುಖ್ಯಮುಂತ್ರಿ ಪಾತ್ರದಲ್ಲಿ ಅಭಿನಯಿಸಿರುವ ಖ್ಯಾತಿ ಲೋಹಿತಾಶ್ವ ಅವರದ್ದು. ಇನ್ನು ಲೋಹಿತಾಶ್ವ ಅವರ ಪುತ್ರ ಶರತ್ ಲೋಹಿತಾಶ್ವ ಕೂಡ ಬೇಡಿಕೆಯ ನಟನಾಗಿ ಹೊರ ಹೊಮ್ಮಿದ್ದಾರೆ.

ಕೃಷ್ಣ ಜಿ ರಾವ್:ಕೆಜಿಎಫ್ ಹಾಗೂ ಕೆಜಿಎಫ್ 2 ಸಿನಿಮಾಗಳಲ್ಲಿ ಅಭಿನಯಿಸಿದ ಕೃಷ್ಣಾ ಜಿ ರಾವ್ ಡಿಸೆಂಬರ್ 07 ರಂದು ನಿಧನ ಹೊಂದಿದರು. ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇದೇ ತಿಂಗಳ ಆರಂಭದಲ್ಲಿ ಕೊನೆಯುಸಿರೆಳೆದರು. ಕೃಷ್ಣಾಜಿ ರಾವ್ ನಿಧನರಾದರು.

ಗಂಡಸಿ ನಾಗರಾಜ್: ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಹಾಗೂ ಕೆಲವು ಸಿನಿಮಾಗಳಲ್ಲಿ ಹಾಸ್ಯ ನಟರಾಗಿಯೂ ಕೆಲಸ ಮಾಡಿದ್ದ ಗಂಡಸಿ ನಾಗರಾಜ್ ಈ ವರ್ಷ ಇಹಲೋಕ ತ್ಯಜಿಸಿದರು. ಗಂಡಸಿ ನಾಗರಾಜ್ ಅವರು ನವರಸ ನಾಯಕ ಜಗ್ಗೇಶ್ ಅವರ ಆಪ್ತ ಕಾಸ್ಟ್ಯೂಮ್ ಡಿಸೈನರ್ ಆಗಿದ್ದರು. ಜಗ್ಗೇಶ್ ಅವರ ಜೊತೆ 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ:2022ನೇ ವರ್ಷದಲ್ಲಿ ಬದುಕಿನ ಪಯಣ ಮುಗಿಸಿದ ಕನ್ನಡ ತಾರೆಯರನ್ನು ಸ್ಮರಿಸೋಣ..

ಈ ವರ್ಷ ತಮ್ಮ ಬದುಕಿನ ಪಯಣ ಮುಗಿಸಿದ ಕನ್ನಡ ತಾರೆಯರು ಇವರು. ಸದ್ಯ ಅವರನ್ನು ಸ್ಮರಿಸುವ ಕಾರ್ಯ ನಡೆಯುತ್ತಿದೆ.

ABOUT THE AUTHOR

...view details