ಕನ್ನಡ ಚಿತ್ರರಂಗದಲ್ಲಿ ಜೇಮ್ಸ್, ಕೆಜಿಎಫ್ 2 , ಚಾರ್ಲಿ 777, ವಿಕ್ರಾಂತ್ ರೋಣ ಸಿನಿಮಾಗಳು ಭರ್ಜರಿ ಯಶಸ್ಸು ಕಂಡು ಕನ್ನಡ ಫಿಲ್ಮ್ ಇಂಡಸ್ಟ್ರಿಯನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದೆ. ಇದೀಗ ಗಾಳಿಪಟ 2 ಸಿನಿಮಾ ಹಿಟ್ ಸಿನಿಮಾಗಳ ಸಾಲಿಗೆ ಸೇರ್ಪಡೆ ಆಗುತ್ತಿದೆ. ನಟ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಜೋಡಿ ಮತ್ತೊಮ್ಮೆ ಉತ್ತಮ ಕಾಂಬಿನೇಶನ್ ಅಂತಾ ಪ್ರೂವ್ ಮಾಡಿದೆ.
ಗಾಳಿಪಟ 2 ಸಕ್ಸಸ್: ಆಗಸ್ಟ್ 12ರಂದು ಕರ್ನಾಟಕ ಅಲ್ಲದೇ ವಿಶ್ವಾದ್ಯಂತ ತೆರೆಕಂಡ ಗಾಳಿಪಟ 2 ಸಿನಿಮಾ, ಎಲ್ಲಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುವ ಮೂಲಕ ನಿರ್ಮಾಪಕ ಎಂ ರಮೇಶ್ ರೆಡ್ಡಿ ಅವರ ಜೇಬು ತುಂಬಿಸಿದೆ. ಈ ಸಿನಿಮಾ ಸಕ್ಸಸ್ ಕಂಡಿರುವ ಹಿನ್ನೆಲೆಯಲ್ಲಿ ಗಾಳಿಪಟ 2 ಚಿತ್ರತಂಡ ಖಾಸಗಿ ಹೋಟೆಲ್ನಲ್ಲಿ ಈ ಚಿತ್ರದ ಜರ್ನಿ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದೆ.
ಗಾಳಿಪಟ 2 ಸಿನಿಮಾದಲ್ಲಿ ಗಣೇಶ್ ತಂದೆ ಪಾತ್ರ ಮಾಡಿರುವ ರಂಗಾಯಣ ರಘು ಮಾತನಾಡಿ, ಪ್ಯಾನ್ ಇಂಡಿಯಾ ಸಿನಿಮಾಗಳ ಮಧ್ಯೆ ನಮ್ಮ ಕನ್ನಡದ ಸಿನಿಮಾ ಗಾಳಿಪಟ 2 ಸಕ್ಸಸ್ ಆಗಿರೋದು ನಮ್ಮ ಹೆಮ್ಮೆ. ನಮ್ಮ ನಿರ್ಮಾಪಕರಿಗೆ ಲಾಭ ತಂದುಕೊಟ್ಟಿದೆ. ಈಗಾಗಲೇ ತಮಿಳುನಾಡಿಗೆ ಕಾವೇರಿ ಹರಿದು ಹೋಗುತ್ತಿದೆ. ಮಹಾರಾಷ್ಟ್ರಕ್ಕೆ ಮಹಾದಾಯಿ ಹೋಗುತ್ತಿದೆ. ಹೀಗೆ ಇರಬೇಕಾದ್ರೆ, ಭಟ್ರು, ಗಣೇಶ್ ಸೇರಿ ಮತ್ತೆ ಕನ್ನಡ ಚಿತ್ರರಂಗಕ್ಕೆ ಭರವಸೆಯ ಸಿನಿಮಾ ಕೊಟ್ಟಿದ್ದಾರೆ. ಇದು ಹೊಸಬರಿಗೆ ಹಾಗು ನಮ್ಮ ತಂತ್ರಜ್ಞನರಿಗೆ ಕೆಲಸ ಸಿಗುವಂತೆ ಮಾಡಿದೆ ಎಂದರು.