ರಾಷ್ಟ್ರಪ್ರಶಸ್ತಿ ವಿಜೇತ ನಟ ದಿ. ಸಂಚಾರಿ ವಿಜಯ್ ಅಭಿನಯದ ಕೊನೆಯ ಸಿನಿಮಾ ಮೇಲೊಬ್ಬ ಮಾಯಾವಿ ಬಿಡುಗಡೆಗೆ ಸಿದ್ಧವಾಗಿದೆ. ದಕ್ಷಿಣ ಕನ್ನಡದಲ್ಲಿ ನಡೆಯುವ ಹರಳು ಮಾಫಿಯಾದ ಹಿಂದಿನ ಕಟು ಸತ್ಯಗಳನ್ನು ಒಳಗೊಂಡಿರುವ ಮೇಲೊಬ್ಬ ಮಾಯಾವಿ ಚಲನಚಿತ್ರದ ಚಿತ್ರೀಕರಣ ಮುಗಿದಿದ್ದು, ಇದೇ ತಿಂಗಳ 29 ರಂದು ಪ್ರೇಕ್ಷಕರ ಮುಂದೆ ಬರಲಿದೆ ಎಂದು ಚಿತ್ರತಂಡ ಹೇಳಿದೆ.
ಈ ಹಿನ್ನೆಲೆಯಲ್ಲಿ ಶ್ರೀನಗರ ಕಿಟ್ಟಿಯವರು ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ನಿರ್ದೇಶಕ ಬಿ.ನವೀನ್ ಕೃಷ್ಣ ಚಿತ್ರಕಥೆ ಬರೆದು, ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ ಮೇಲೊಬ್ಬ ಮಾಯಾವಿ ಚಿತ್ರ ತಂಡ ಬಳಿಕ ಮಾತನಾಡಿದ ನಟ ಕೃಷ್ಣಮೂರ್ತಿ ಕವತ್ತಾರ್, ಈ ಚಿತ್ರದಲ್ಲಿ ಸಂಚಾರಿ ವಿಜಯ್ ಅವರು ಬಹಳ ಚೆನ್ನಾಗಿ ನಟಿಸಿದ್ದಾರೆ. ನಾನು ಚಿತ್ರದಲ್ಲಿ ಚಾಲೆಂಜಿಂಗ್ ಪಾತ್ರ ಮಾಡಿದ್ದೀನಿ, ಜೊತೆಗೆ ಸಂಚಾರಿ ವಿಜಯ್ ಅವರಿಂದ ಸಾಕಷ್ಟು ಕಲಿತಿರುವುದಾಗಿ ಹೇಳಿದರು. ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿರುವ ಚಕ್ರವರ್ತಿ ಚಂದ್ರಚೂಡ್ ಮಾತನಾಡಿ, ಈ ಸಿನಿಮಾವನ್ನ ಸಂಚಾರಿ ವಿಜಯ್ ಕೊನೆಯ ಸಿನಿಮಾ ಎಂದು ನೋಡಬೇಡಿ, ಯಾಕೆಂದರೆ ವಿಜಯ್ ಅವರು ಬದುಕಿದ್ದಾಗ ಸಾಕಷ್ಟು ಒಳ್ಳೆ ಕೆಲಸಗಳನ್ನು ಮಾಡಿದ್ದರು ಎಂದು ಹೇಳಿದ್ದಾರೆ. ಈ ಸಿನಿಮಾ ಮಾಡುವುದಕ್ಕೆ ಪತ್ರಕರ್ತ ದಿ. ರವಿ ಬೆಳಗೆರೆ ಪ್ರಮುಖ ಕಾರಣ ಎಂದು ಹೇಳಿದರು.
ಈ ಚಿತ್ರದಲ್ಲಿ ಸಂಚಾರಿ ವಿಜಯ್, ಅನನ್ಯ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್, ಕೃಷ್ಣಮೂರ್ತಿ ಕವತ್ತಾರ್, ಅಲ್ಲದೇ ಎಮ್.ಕೆ.ಮಠ, ಬೆನಕ ನಂಜಪ್ಪ, ಮಾಸ್ಟರ್ ಲಕ್ಷ್ಮೀ ಅರ್ಪಣ್, ನವೀನ್‌ಕುಮಾರ್, ಪವಿತ್ರಾ ಜಯರಾಮ್, ಮುಖೇಶ್, ಡಾ||ಮನೋನ್ಮಣಿ, ಸೇರಿದಂತೆ ಸಾಕಷ್ಟು ರಂಗಭೂಮಿ ನಟರು ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಟ್ರೈಲರ್ ನಿಂದ ಗಮನ ಸೆಳೆಯುತ್ತಿರೋ ಮೇಲೊಬ್ಬ ಮಾಯಾವಿ ಚಿತ್ರ ಇದೇ ತಿಂಗಳು ತೆರೆ ಮೇಲೆ ಬರಲಿದೆ.
ಓದಿ :ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ ಅಂತಿದ್ದಾರೆ ನಿರ್ದೇಶಕ ಪ್ರೇಮ್-ಧ್ರುವಾ ಸರ್ಜಾ