ಸಮಂತಾ ರುತ್ ಪ್ರಭು ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಸದ್ದು ಮಾಡಿರುವ ಚೆಲುವೆ. ನಟಿಯ ಕೊನೆಯ ಚಿತ್ರ 'ಖುಷಿ'. ಸದ್ಯಕ್ಕೆ ಯಾವುದೇ ಸಿನಿಮಾಗಳನ್ನು ಘೋಷಿಸಿಲ್ಲ. ತಮ್ಮ ಆರೋಗ್ಯ ಚೇತರಿಕೆಗೆ ಸಮಯ ಮೀಸಲಿಟ್ಟಿದ್ದಾರೆಂದು ನಂಬಲಾಗಿದೆ. ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಗಮನ ಸೆಳೆಯುತ್ತಾರೆ. ಅಪರೂಪಕ್ಕೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.
ಈಗಾಗಲೇ ವಿವಿಧ ಸಂದರ್ಶನಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ 'ಮಯೋಸಿಟಿಸ್'ನಿಂದ ಬಳಲುತ್ತಿರುವ ಬಗ್ಗೆ ಹೇಳಿಕೊಂಡಿರುವ ನಟಿ ಸಮಂತಾ ರುತ್ ಪ್ರಭು ಅವರು ಕಳೆದ ಎರಡು ವರ್ಷಗಳಲ್ಲಿ ಎದುರಿಸಿದ ವೈಯಕ್ತಿಕ ಮತ್ತು ವೃತ್ತಿಪರ ಸವಾಲುಗಳ ಕುರಿತು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ನಟ ನಾಗ ಚೈತನ್ಯ ಅವರೊಂದಿಗಿನ ದಾಂಪತ್ಯ ಜೀವನ ಅಂತ್ಯ ಕಂಡಾಗ ಮತ್ತು ಸಿನಿಮಾಗಳ ಹಿನ್ನೆಡೆ ವಿಚಾರವಾಗಿ ನಟಿ ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದರು.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ಸಮಂತಾ ರುತ್ ಪ್ರಭು ತಮ್ಮ ಹೋರಾಟದ ದಿನಗಳನ್ನು ನೆನಪಿಸಿಕೊಂಡರು. ದಾಂಪತ್ಯ ಜೀವನ ಅಂತ್ಯಗೊಂಡ ಸಂದರ್ಭ ಆರೋಗ್ಯ ಹದಗೆಟ್ಟಿತು. ಸಿನಿ ವೃತ್ತಿಜೀವನಕ್ಕೂ ಹಿನ್ನಡೆಯಾಗಿತ್ತು. ಎಲ್ಲಾ ಸಮಸ್ಯೆಗಳೂ ಒಂದೇ ಬಾರಿ ತಮ್ಮ ಮೇಲೆ ಅಪ್ಪಳಿಸುತ್ತಿವೆ ಎಂದು ಸಮಂತಾ ಭಾವಿಸಿದ್ದರಂತೆ. ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ, ಪುಟಿದೇಳುವ, ಆನ್‌ಲೈನ್ ಟ್ರೋಲಿಂಗ್ ಅನ್ನು ಎದುರಿಸಿದ, ಅತ್ಯಂತ ಆತಂಕದ ಕ್ಷಣಗಳನ್ನು ಅನುಭವಿಸಿದ ನಟರ ಬಗೆಗಿನ ಬರಹಗಳನ್ನು ನಾನು ಓದಿ ತಿಳಿದುಕೊಂಡೆ. ಅವರ ಕಥೆಗಳು ನನಗೆ ಸಹಕಾರಿಯಾದವು. ನನ್ನ ಶಕ್ತಿಯನ್ನು ಮರಳಿ ಪಡೆಯಲು ಅವು ಸಹಾಯ ಮಾಡಿವೆ ಎಂದು ನಟಿ ಮಾಹಿತಿ ಹಂಚಿಕೊಂಡಿದ್ದಾರೆ.