ನಟಿ ಸಮಂತಾ ರುತ್ ಪ್ರಭು ಕಳೆದ ಕೆಲವು ದಿನಗಳಿಂದ ಮಾಧ್ಯಮದ ಮುಂದೆ ಕಾಣಿಸಿಕೊಂಡಿರಲಿಲ್ಲ. ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡಿರುವ ನಟಿ ಮಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು. ಹಲವು ತಿಂಗಳುಗಳ ಚಿಕಿತ್ಸೆ ಪಡೆದ ನಂತರವೂ ಅವರು ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಆದರೂ ತನ್ನ ಅಭಿಮಾನಿಗಳ ಖುಷಿಗಾಗಿ ಅನಾರೋಗ್ಯದ ನಡುವೆ ಸಿನಿಮಾದ ಕೆಲಸಗಳನ್ನು ಪೂರ್ಣಗೊಳಿಸುತ್ತಿದ್ದಾರೆ.
ಸಮಂತಾ ಅಭಿನಯದ 'ಯಶೋದಾ' ಸಿನಿಮಾದ ಬಳಿಕ ಇದೀಗ 'ಶಾಕುಂತಲಂ' ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಸೋಮವಾರ ಹೈದರಾಬಾದ್ನಲ್ಲಿ ನಡೆದಿತ್ತು. ಈ ವೇಳೆ ನಟಿ ಮಾತನಾಡುತ್ತಾ, ಭಾವುಕರಾಗಿ ಕಣ್ಣೀರು ಹಾಕಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದಕ್ಕೆ ಕಮೆಂಟ್ಗಳ ಮಹಾಪೂರವೇ ಹರಿದುಬಂದಿದ್ದು, ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಿಮಾನಿಗಳು ಸಮಂತಾಗೆ ಧೈರ್ಯ ತುಂಬಿದ್ದರು. ಈ ಮಧ್ಯೆ 'ಬಝ್ ಬಾಸ್ಕೆಟ್' ಎಂಬ ಟ್ವಿಟರ್ ಪೇಜ್ ನಟಿಯ ಭಾವನೆಯನ್ನು ವ್ಯಂಗ್ಯವಾಗಿ ಬಿಂಬಿಸಿತ್ತು.
'ಸಮಂತಾ ಅವರನ್ನು ನೋಡಿದಾಗ ಬೇಸರವಾಗುತ್ತದೆ. ಅವರು ತಮ್ಮ ಚಾರ್ಮ್ ಮತ್ತು ಹೊಳಪು ಕಳೆದುಕೊಂಡಿದ್ದಾರೆ. ವಿಚ್ಛೇದನಜ ನಂತರ ಅವರು ಮತ್ತಷ್ಟು ಗಟ್ಟಿಯಾಗುತ್ತಾರೆ, ಧೈರ್ಯಶಾಲಿಯಾಗುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಅವರ ವೃತ್ತಿಪರ ಜೀವನ ಮತ್ತಷ್ಟು ಎತ್ತರಕ್ಕೆ ಹೋಗುತ್ತದೆ ಎಂದು ಅಂದುಕೊಂಡಿದ್ದರು. ಆದರೆ ಮೈಯಾಸಿಟಿಸ್ ಕಾಯಿಲೆ ಅವರನ್ನು ಬಳಲುವಂತೆ ಮಾಡಿದೆ. ಮತ್ತಷ್ಟು ದುರ್ಬಲರಾಗಿದ್ದಾರೆ' ಎಂದು ಟ್ವೀಟ್ನಲ್ಲಿ ಫೋಟೋ ಜೊತೆಗೆ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ವೇದಿಕೆ ಮೇಲೆಯೇ ಕಣ್ಣೀರಿಟ್ಟ 'ಶಾಕುಂತಲಾ' .. ವ್ಯಂಗ್ಯ ಪೋಸ್ಟ್ಗಳಿಗೆ ಬೇಸತ್ತು ಸಮಂತಾ ಹೇಳಿದ್ದೇನು?
ಈ ಟ್ವೀಟ್ಗೆ ಸಮಂತಾ ಪ್ರತಿಕ್ರಿಯಿಸಿ, 'ನನ್ನಂತೆ ನಿಮಗೆ ತಿಂಗಳುಗಟ್ಟಲೆ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುವ ಪರಿಸ್ಥಿತಿ ಬರುವುದು ಬೇಡ ಎಂದು ಬೇಡಿಕೊಳ್ಳುತ್ತೇನೆ. ನಿಮ್ಮಲ್ಲಿ ಉತ್ಸಾಹ, ಹೊಳಪು ಇನ್ನಷ್ಟು ಬರಲಿ' ಎಂದು ಖಡಕ್ ಉತ್ತರ ನೀಡಿ, ಶಾಂತಿಯ ಪ್ರತೀಕವಾದ ಬಿಳಿ ಹೃದಯದ ಇಮೋಜಿ ಹಾಕಿದ್ದಾರೆ. ಇದನ್ನು ಕಂಡ ಸಮಂತಾ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, 'ನೀವು ಸರಿಯಾದ ಉತ್ತರವನ್ನೇ ನೀಡಿದ್ದೀರಿ. ನಿಮಗೆ ಒಳ್ಳೆಯದಾಗಲಿ' ಎಂದು ಹಾರೈಸಿದ್ದಾರೆ.
ಇದಕ್ಕೆ ಅಭಿಮಾನಿಯೊಬ್ಬರು ನಟಿಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದು, 'ದೀರ್ಘ ಕಾಲದ ರೋಗಗಳ ಬಗ್ಗೆ ತಿಳಿಯದವರು ಈ ರೀತಿಯ ಹೇಳಿಕೆ ನೀಡುತ್ತಾರೆ. ಅಂತಹವರ ಬಗ್ಗೆ ನನಗೆ ವಿಷಾದವಿದೆ. ಅವರ ಅಜ್ಞಾನವನ್ನು ನಾವು ಒಪ್ಪಿಕೊಳ್ಳುವುದೇ ನಮಗಿರುವ ದಾರಿ' ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಸಿರುವ ನಟಿ, 'ಜಗತ್ತು ನಿಮ್ಮನ್ನು ಹೇಗೆ ಬೇಕಾದರೂ ಸ್ವೀಕರಿಸುತ್ತದೆ. ನಾವು ಉತ್ತಮವಾಗಿರಬೇಕು. ನೀವೊಬ್ಬ ಒಳ್ಳೆಯ ಮನಸ್ಸಿನ ವ್ಯಕ್ತಿ' ಎಂದು ಧನ್ಯವಾದ ಅರ್ಪಿಸಿದ್ದಾರೆ.
ಈ ಹಿಂದೆಯೂ ನೆಟ್ಟಿಗರಿಗೆ ಉತ್ತರಿಸಿದ್ದ ನಟಿ: ಮಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಸಮಂತಾ ಹೇಳಿಕೊಂಡ ಬಳಿಕ ಸಾಕಷ್ಟು ಕಮೆಂಟ್ಗಳು ಬರಲು ಪ್ರಾರಂಭಿಸಿದ್ದವು. ಈ ಬಗ್ಗೆ ಬೇಸತ್ತ ನಟಿ, ಕೆಲವು ಒಳ್ಳೆಯ ದಿನಗಳಿರುತ್ತವೆ, ಕೆಲವು ಕೆಟ್ಟ ದಿನಗಳಿರುತ್ತವೆ ಮತ್ತು ಕೆಲವೊಮ್ಮೆ ಹಾಸಿಗೆಯಿಂದ ಹೊರಬರಲೂ ಕಷ್ಟವಾಗುತ್ತದೆ. ನಾನು ಹೋರಾಟಗಾರ್ತಿ. ಈ ಕಾಯಿಲೆ ವಿರುದ್ಧ ಹೋರಾಡುತ್ತೇನೆ' ಎಂದಿದ್ದರು.
'ಅಲ್ಲದೇ ಕೆಲವು ಬರಹಗಳು ತಾನು ಜೀವನದ ಅಪಾಯಕಾರಿ ಹಂತದಲ್ಲಿದ್ದೇನೆ ಎಂದು ಹೇಳಿಕೊಂಡಿವೆ. ಆದರೆ ನಾನು ಮೂರು ತಿಂಗಳಿನಿಂದ ಔಷಧ ಪಡೆಯುತ್ತಿದ್ದೇನೆ, ನಾನು ಸಾಯಲಾರೆ ಎಂದು ಸ್ಪಷ್ಟಪಡಿಸುತ್ತೇನೆ. ನಾನು ಗಂಭೀರ ಪರಿಸ್ಥಿತಿಯಲ್ಲಿದ್ದೇನೆ ಎಂದು ಹೇಳಿರುವ ಅನೇಕ ಲೇಖನಗಳನ್ನು ನೋಡಿದ್ದೇನೆ. ಹೌದು, ಇದು ಸ್ವಯಂ ನಿರೋಧಕ ಸ್ಥಿತಿ. ಇದು ಸಮಯ ತೆಗೆದುಕೊಳ್ಳುತ್ತಿದೆ. ಆದರೆ ನಾನು ಹೋರಾಟಗಾರ್ತಿ, ಹೋರಾಡುತ್ತೇನೆ' ಎಂದು ಧೈರ್ಯದ ನುಡಿಗಳನ್ನಾಡಿದ್ದರು. ಅದರಂತೆ ಇದೀಗ ಮತ್ತೆ ಸಮಂತಾ ಮಾಧ್ಯಮದ ಮುಂದೆ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಶಾಕುಂತಲಂ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ.. ವೇದಿಕೆ ಮೇಲೆಯೇ ಕಣ್ಣೀರಿಟ್ಟ ನಟಿ ಸಮಂತಾ