ದಕ್ಷಿಣ ಚಿತ್ರರಂಗದ ಟಾಪ್ ನಟಿ ಸಮಂತಾ ರುತ್ ಪ್ರಭು ಅವರು ತಮ್ಮ ಮುಂಬರುವ ಬಹುನಿರೀಕ್ಷಿತ ಪೌರಾಣಿಕ ಆಧಾರಿತ ಚಿತ್ರ 'ಶಾಕುಂತಲಂ' ಪ್ರಚಾರವನ್ನು ಜೋರಾಗಿಯೇ ನಡೆಸುತ್ತಿದ್ದಾರೆ. ಸಿನಿಮಾ ಪ್ರಮೋಶನ್ ಸಮಯದಲ್ಲಿ, ಸಮಂತಾ ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡುತ್ತಾ ಸದ್ಯ ಸಖತ್ ಸುದ್ದಿಯಲ್ಲಿದ್ದಾರೆ.
ತಮ್ಮ ಜೀವನದ ಕರಾಳ ಹಂತ, ವಿಚ್ಛೇದನ, ಮಯೋಸಿಟಿಸ್ನೊಂದಿಗಿನ ಹೋರಾಟ ಮತ್ತು ಶೋಭಿತಾ ಧುಲಿಪಾಲ (Sobhita Dhulipala) ಜೊತೆ ಮತ್ತೆ ಪ್ರೀತಿಯನ್ನು ಕಂಡುಕೊಂಡ ಮಾಜಿ ಪತಿ ನಾಗ ಚೈತನ್ಯ ಬಗ್ಗೆ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಅವರ ವೈಯಕ್ತಿಕ ಜೀವನವು ಹೆಚ್ಚು ಸೌಂಡ್ ಮಾಡುತ್ತಿದೆ.
ನಾಗ ಚೈತನ್ಯ ಜೊತೆಗಿನ ಸಂಬಂಧ ವಿಫಲವಾಗಿರುವ ಬಗ್ಗೆ ಸಮಂತಾ ದನಿ ಎತ್ತಿದ್ದಾರೆ. ಪ್ರೀತಿ, ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಶೇ. 100ರಷ್ಟು ತನ್ನ ಕರ್ತವ್ಯ ನಿಭಾಯಿಸಿದೆ. ದುರಾದೃಷ್ಟವಶಾತ್ ಅದು ಕೆಲಸ ಮಾಡಲಿಲ್ಲ. ಈ ಹಿನ್ನೆಲೆ, ತಾನಿನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ನಟಿ ಹೇಳಿದ್ದಾರೆ. ಮತ್ತೊಂದೆಡೆ, ನಟ, ವಿಚ್ಛೇದಿತ ಪತಿ ನಾಗ ಚೈತನ್ಯ ಮೇಲ್ನೋಟಕ್ಕೆ ಜೀವನದಲ್ಲಿ ಮುಂದುವರೆದಿದ್ದಾರೆ. ಶೋಭಿತಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ.
'ತಲೆಕೆಡಿಸಿಕೊಳ್ಳುವುದಿಲ್ಲ'.... ಶಾಕುಂತಲಂ ಚಿತ್ರ ಪ್ರಚಾರದ ಸಂದರ್ಶನವೊಂದರಲ್ಲಿ, ನಾಗ ಚೈತನ್ಯ ಮತ್ತು ಶೋಭಿತಾ ಡೇಟಿಂಗ್ ವದಂತಿಗಳಿಗೆ ಸಮಂತಾ ಪ್ರತಿಕ್ರಿಯಿಸಿದ್ದಾರೆ. ಯಾರು ಯಾರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಯಾರ ಹೆಸರನ್ನೂ ಉಲ್ಲೇಖಿಸದ ಸಮಂತಾ, ಪ್ರೀತಿಯ ಮೌಲ್ಯವನ್ನು ತಿಳಿದಿಲ್ಲದವರು "ಎಷ್ಟು ಜನರೊಂದಿಗೆ ಡೇಟ್ ಮಾಡಿದರೂ ಕಣ್ಣೀರು ಹಾಕುತ್ತಾರೆ" ಎಂದು ಹೇಳಿದರು. "ಕನಿಷ್ಠ ಆ ಹುಡುಗಿಯಾದರೂ ಸಂತೋಷವಾಗಿರಬೇಕು, ಅವರು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡು ಆ ಹುಡುಗಿಯನ್ನು ನೋಯಿಸದಂತೆ ನೋಡಿಕೊಂಡರೆ ಎಲ್ಲರಿಗೂ ಒಳ್ಳೆಯದು" ಎಂದು ಹೇಳಿದರು.