ವಿಕ್ಕಿ ಕೌಶಲ್ ಮುಖ್ಯಭೂಮಿಕೆಯ 'ಸ್ಯಾಮ್ ಬಹದ್ದೂರ್' ಸಿನಿಮಾ ಇಂದು ತೆರೆಗಪ್ಪಳಿಸಿದೆ. ಭಾರತೀಯ ಸೇನೆಯ ಮಾಜಿ ಸೇನಾ ಮುಖ್ಯಸ್ಥ ಸ್ಯಾಮ್ ಮಾಣೆಕ್ ಶಾ ಅವರ ಜೀವನಾಧಾರಿತ ಕಥೆಗೆ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಸರಿಸುಮಾರು 1,03,192 ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ. ಅಂದರೆ ಮೊದಲ ದಿನದ ಶೋಗಳು 3.05 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ. ಇದು ಆನ್ಲೈನ್ ವ್ಯವಹಾರದ ಮಾಹಿತಿ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಭಾರತೀಯ ಬಾಕ್ಸ್ ಆಫಿಸ್ನಲ್ಲಿ 'ಸ್ಯಾಮ್ ಬಹದ್ದೂರ್' ಮೊದಲ ದಿನ 6 ಕೋಟಿ ರೂ. ಗಳಿಸಬಹುದು. ಮೇಘನಾ ಗುಲ್ಜಾರ್ ನಿರ್ದೇಶನದ ಈ ಸಿನಿಮಾ 55 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿದ್ದು, 50 ಕೋಟಿ ದಾಟಿದರೆ ಸಿನಿಮಾ ಯಶಸ್ವಿ ಆಗಲಿದೆ.
ಥಿಯೇಟರ್ಗಳಲ್ಲಿ ಆಕ್ಯುಪೆನ್ಸಿ ರೇಟ್ ಗಮನಿಸಿದ್ರೆ, ದೆಹಲಿಯಲ್ಲಿ ಶೇ. 22, ತಮಿಳುನಾಡಿನಲ್ಲಿ ಶೇ. 20, ಅಸ್ಸೋಂ , ಕೇರಳ ಮತ್ತು ತೆಲಂಗಾಣಗಳಲ್ಲಿ ಶೇ. 16 ರಷ್ಟಿದೆ. ಇನ್ನೂ ಇಂದೇ ತೆರೆಕಂಡಿರುವ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಅನಿಮಲ್ ಮೊದಲ ದಿನ ಪಂಚ ಭಾಷೆಗಳೂ ಸೇರಿ ಭಾರತ ಮತ್ತು ಜಾಗತಿಕವಾಗಿ ಒಟ್ಟು ಬರೋಬ್ಬರಿ 100 ಕೋಟಿ ರೂ. ವ್ಯವಹಾರ ನಡೆಸಲಿದೆ ಎಂದು ಸಿನಿ ಪಂಡಿತರು ಅಂದಾಜಿಸಿದ್ದಾರೆ.
ಸ್ಯಾಮ್ ಬಹದ್ದೂರ್ ಸಿನಿಮಾದ ಅಂಕಿಅಂಶಗಳು ನಿರ್ದಿಷ್ಟ ರಾಜ್ಯಗಳಲ್ಲಿ ಸಿನಿಮಾ ಮೇಲಿನ ಆಸಕ್ತಿ, ಉತ್ಸಾಹವನ್ನು ಸೂಚಿಸುತ್ತವೆ. ಸಿಕ್ಕಿಂನಲ್ಲಿ ಸಿನಿಮಾ ಮೇಲೆ ಕಿಂಚಿತ್ತೂ ಆಸಕ್ತಿ ವ್ಯಕ್ತವಾಗಿಲ್ಲ. ಆಂಧ್ರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಆಕ್ಯುಪೆನ್ಸಿ ರೇಟ್ ಕೇವಲ ಶೇ. 3ರಷ್ಟಿದೆ.