ಕನ್ನಡ ಭಾಷೆ ಗೊತ್ತಿಲ್ಲದ ಕಾರಣಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ವಿಭಾಗದ ಪರಿಶೀಲನಾ ಅಧಿಕಾರಿಯೊಬ್ಬರು (immigration officer) ತನಗೆ ಅವಮಾನ ಮಾಡಿದ್ದಾರೆ ಎಂದು ನೃತ್ಯಗಾರ, ನೃತ್ಯ ನಿರ್ದೇಶಕ ಸಲ್ಮಾನ್ ಯೂಸುಫ್ ಖಾನ್ (Salman Yusuff Khan) ಇಂದು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿದ್ದರೂ ಕನ್ನಡ ಭಾಷೆ ತಿಳಿಯದಿದ್ದಕ್ಕೆ ಅಧಿಕಾರಿ ತನ್ನನ್ನು ಪ್ರಶ್ನಿಸಿ ಬೆದರಿಕೆ ಹಾಕಿದ್ದಾರೆ ಎಂದು ಸಲ್ಮಾನ್ ಯೂಸುಫ್ ಖಾನ್ ದೂರಿದ್ದಾರೆ.
'ಸ್ಥಳೀಯ ಭಾಷೆಯನ್ನು ಕಲಿಸಿಕೊಡಿ': "ನಾನು ಹೆಮ್ಮೆಯ ಬೆಂಗಳೂರಿಗ. ಆದರೆ, ಇಂದು ನಾನು ಎದುರಿಸುತ್ತಿರುವ ಸಮಸ್ಯೆ ಸ್ವೀಕಾರ್ಹವಲ್ಲ. ನೀವು ಯಾವಾಗಲೂ ಯಾವುದೇ ಸ್ಥಳೀಯ ಭಾಷೆಯನ್ನು ಕಲಿಯಲು ಜನರನ್ನು ಪ್ರೋತ್ಸಾಹಿಸಬೇಕು. ಆದರೆ ಯಾರನ್ನೂ ಕೂಡ ಭಾಷೆ ಗೊತ್ತಿಲ್ಲವೆಂದು ಕೀಳಾಗಿ ಕಾಣಬೇಡಿ. ಮತ್ತು ಪೋಷಕರ ಹೆಸರನ್ನು ಎಳೆದು ತರಬೇಡಿ" ಎಂದು ಸಲ್ಮಾನ್ ಯೂಸುಫ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ
ಕನ್ನಡ ಅರ್ಥಮಾಡಿಕೊಳ್ಳಬಲ್ಲರು..ಸಲ್ಮಾನ್ ಯೂಸುಫ್ ಖಾನ್ ದುಬೈನಿಂದ ಹಿಂದಿರುಗಿದ ವೇಳೆ ಘಟನೆ ನಡೆದಿದೆ. ಅಧಿಕಾರಿಯೊಬ್ಬರು ನೃತ್ಯ ಸಂಯೋಜಕರೊಂದಿಗೆ ಕನ್ನಡದಲ್ಲಿ ಮಾತನಾಡಿದ್ದಾರೆ. ಸಲ್ಮಾನ್ ಕನ್ನಡ ಅರ್ಥಮಾಡಿಕೊಳ್ಳಬಲ್ಲರು ಆದರೆ ನಿರರ್ಗಳವಾಗಿ ಮಾತನಾಡಲು ಕಷ್ಟಸಾಧ್ಯ ಎಂದು ತಿಳಿಸಲು ಪ್ರಯತ್ನಿಸಿದರು.
ಬೆಂಗಳೂರಿನಲ್ಲಿ ಜನನ, ವಿದೇಶದಲ್ಲಿ ಬೆಳವಣಿಗೆ: ತನ್ನ ಪಾಸ್‌ಪೋರ್ಟ್‌ನಲ್ಲಿ ಜನ್ಮಸ್ಥಳ ಬೆಂಗಳೂರು ಎಂದಿತ್ತು. ಅದನ್ನು ಗುರಿಯಾಗಿಸಿ ಆ ಅಧಿಕಾರಿ ಮಾತನಾಡಿದ್ದಾರೆ. "ನೀವು ಮತ್ತು ನಿಮ್ಮ ತಂದೆ ಬೆಂಗಳೂರಿನಲ್ಲಿ ಹುಟ್ಟಿದ್ದೀರಿ ಮತ್ತು ನಿಮಗೆ ಕನ್ನಡ ಮಾತನಾಡಲು ಬರುವುದಿಲ್ಲ'' ಎಂದು ಹೇಳಿದರು. ಅದಕ್ಕೆ ನಾನು ''ಬೆಂಗಳೂರಿನಲ್ಲಿ ಹುಟ್ಟಿದ್ದೇನೆ ಎಂದರೆ ನಾನು ಭಾಷೆಯೊಂದಿಗೆ ಹುಟ್ಟಿದ್ದೇನೆ ಎಂದು ಅರ್ಥವಲ್ಲ ಎಂದು ಉತ್ತರಿಸಿದೆ'' ಎಂದು ಸಲ್ಮಾನ್ ತಿಳಿಸಿದ್ದಾರೆ.