ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಅವರ 'ಕಿಸಿ ಕಿ ಭಾಯ್ ಕಿಸಿ ಕಿ ಜಾನ್' ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಇದು ವರ್ಷದ ಬಹು ನಿರೀಕ್ಷಿತ ಸಿನಿಮಾವಾಗಿದ್ದು, ಕಲೆಕ್ಷನ್ ವಿಷಯದಲ್ಲಿ ಬುಧವಾರ ಭಾರೀ ಕುಸಿತ ಕಂಡಿದೆ. ಬಿಡುಗಡೆಯಾದ ಆರನೇ ದಿನಕ್ಕೆ ಸುಮಾರು 4.25 ಕೋಟಿ ರೂ ಗಳಿಸಿದೆ. ಹೀಗಾಗಿ ಭಾರತದಲ್ಲಿ ಸಿನಿಮಾದ ಒಟ್ಟು ಗಳಿಕೆಯು ಈವರೆಗೆ 83.25 ಕೋಟಿ ರೂಪಾಯಿಗೆ ಬಂದು ತಲುಪಿದೆ. ಈ ವಾರಾಂತ್ಯದಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸೇರುವ ಸಾಧ್ಯತೆಯಿದೆ.
ಏಪ್ರಿಲ್ 21, ಈದ್ ಹಬ್ಬದ ದಿನದಂದು ಬಿಡುಗಡೆಯಾದ 'ಕಿಸಿ ಕಿ ಭಾಯ್ ಕಿಸಿ ಕಿ ಜಾನ್' ಚಿತ್ರ ಉತ್ತಮ ಪ್ರದರ್ಶನ ಕಂಡಿತ್ತು. ಅದಾಗ್ಯೂ ಗಮನಾರ್ಹ ಕುಸಿತ ಕಂಡುಬಂದಿದೆ. ಬೇರೆ ಯಾವುದೇ ಸಿನಿಮಾಗಳು ಸದ್ಯ ಥಿಯೇಟರ್ನಲ್ಲಿ ಸದ್ದು ಮಾಡುತ್ತಿಲ್ಲ. ಹೀಗಾಗಿ 'ಕಿಸಿ ಕಿ ಭಾಯ್ ಕಿಸಿ ಕಿ ಜಾನ್' ಎರಡನೇ ವಾರದಲ್ಲೂ ಅತ್ಯಂತ ಜನಪ್ರಿಯ ಹಿಂದಿ ಸಿನಿಮಾವಾಗಿ ಮುಂದುವರೆಯುತ್ತದೆ.
ಹೀಗಾಗಿ ಸಲ್ಮಾನ್ ಮುಖ್ಯಭೂಮಿಕೆಯ ಚಿತ್ರವು ಈ ವಾರದಲ್ಲಿ ಉತ್ತಮ ಗಳಿಕೆ ಕಾಣಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. 'ಕಿಸಿ ಕಿ ಭಾಯ್ ಕಿಸಿ ಕಿ ಜಾನ್' ಕಳೆದ ಶುಕ್ರವಾರ ಬಿಡುಗಡೆಯಾಗಿದ್ದು, ಮೊದಲ ವಾರದಲ್ಲಿ 87.50 ರಿಂದ 88 ಕೋಟಿ ರೂ. ವರೆಗೆ ಗಳಿಸುವ ನಿರೀಕ್ಷೆಯಿದೆ. ಚಿತ್ರವು ರೇಸ್‌ನಲ್ಲಿ ಉಳಿಯಲು ಎರಡನೇ ವಾರಾಂತ್ಯದಲ್ಲಿ ಹೆಚ್ಚಿನ ಗಮನಾರ್ಹ ವಹಿಸಬೇಕಾಗುತ್ತದೆ. ಆದರೂ ಭಾರತದಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ದಾಟುವುದು ನಿಶ್ಚಯವಾಗಿದೆ.