ನಟಿ, ಗಾಯಕಿ ಶೆಹನಾಜ್ ಗಿಲ್ ಅವರು ಸಲ್ಮಾನ್ ಖಾನ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಬಿಗ್ ಬಾಸ್ 13ರಲ್ಲಿ ಶೆಹನಾಜ್ ಕಾಣಿಸಿಕೊಂಡ ನಂತರ ಅವರಿಬ್ಬರು ನಿರಂತರ ಸಂಪರ್ಕದಲ್ಲಿದ್ದಾರೆ. ಇದೀಗ 'ಕಿಸಿ ಕಾ ಬಾಯ್ ಕಿಸಿ ಕಿ ಜಾನ್' ಸಿನಿಮಾದ ಮೂಲಕವು ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಶೆಹನಾಜ್ ಕೂಡ ಭಾಗಿಯಾಗಿದ್ದರು. ಈ ವೇಳೆ, ಸಂವಾದ ಕಾರ್ಯಕ್ರಮ ನಡೆಸಲಾಯಿತು. ನಿರೂಪಕರು ಶೆಹನಾಜ್ ಅವರಲ್ಲಿ "ನೀವು ಇಷ್ಟು ದೊಡ್ಡ ಸಿನಿಮಾದ ಶೂಟಿಂಗ್ನಲ್ಲಿ ಪಾಲ್ಗೊಂಡಾಗ ಗಲಿಬಿಲಿಗೊಂಡಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಮಧ್ಯೆ ಪ್ರವೇಶಿಸಿದ ಸಲ್ಮಾನ್, "ನೀವು ಜೀವನದಲ್ಲಿ ಮುಂದುವರೆಯಿರಿ ಶೆಹನಾಜ್" ಎಂದು ಹೇಳಿದ್ದಾರೆ. ಇದಕ್ಕೆ ಶೆಹನಾಜ್, "ಈಗಾಗಲೇ ನಾನು ಮುಂದುವರೆದಿದ್ದೇನೆ" ಎಂದು ತಿಳಿಸಿದ್ದಾರೆ. ಕೂಡಲೇ ಪ್ರತಿಕ್ರಿಯಿಸಿದ ಸಲ್ಲು, "ನೀವು ಮುಂದುವರೆಯಬೇಕೆಂದೇ ನಾನು ಬಯಸುತ್ತೇನೆ. ಹೆಚ್ಚಾಗಿ ಈ ಬಗ್ಗೆ ನಾನೇನು ಹೇಳುವುದಿಲ್ಲ" ಎಂದಿದ್ದಾರೆ. ಇದು ಆಕೆಯ ಆಪ್ತ ಸ್ನೇಹಿತ ಸಿದ್ಧಾರ್ಥ್ ಶುಕ್ಲಾ ಅವರ ನಿಧನದ ನಂತರ ಶೆಹನಾಜ್ ಭಾವನಾತ್ಮಕವಾಗಿ ನೊಂದಿದ್ದರು ಎಂಬುದರ ಬಗ್ಗೆ ಸಲ್ಮಾನ್ ಸುಳಿವು ನೀಡಿದಂತಿದೆ.
ಸಂವಾದದಲ್ಲಿ ಶೆಹನಾಜ್ ತಮ್ಮ ಮೊದಲ ಮ್ಯೂಸಿಕ್ ವಿಡಿಯೋಗಾಗಿ ತಿರಸ್ಕರಿಸಲ್ಪಟ್ಟಿರುವುದನ್ನು ನೆನಪಿಸಿಕೊಂಡರು. "ನನ್ನ ಮೊದಲ ಮ್ಯೂಸಿಕ್ ವಿಡಿಯೋ ಚಿತ್ರೀಕರಣಕ್ಕಾಗಿ ಹೋದಾಗ ನಾನು ತಿರಸ್ಕರಿಸಲ್ಪಟ್ಟೆ. ಇಷ್ಟು ಸಣ್ಣ ಹುಡುಗಿ ನಮಗೆ ಬೇಡ, ಅವಳನ್ನು ಹಿಂದಕ್ಕೆ ಕರೆದುಕೊಂಡು ಹೋಗಿ ಎಂದು ಅಲ್ಲಿ ಹೇಳಿದ್ದರು. ನಾನು ಮನೆಗೆ ಬಂದು ಜೋರಾಗಿ ಅತ್ತಿದ್ದೆ. ಆಗ ನನ್ನ ತಾಯಿ, ನೀನು ಯಾಕೆ ಅಳುತ್ತಿದ್ದೀಯಾ? ಒಂದು ದಿನ ನೀನು ಸಲ್ಮಾನ್ ಖಾನ್ ಜೊತೆ ಚಿತ್ರದಲ್ಲಿ ನಟಿಸುತ್ತೀಯಾ ಎಂದು ಹೇಳಿದ್ದರು. ಅದರಂತೆ ಸರ್ ನನಗೆ ಒಂದು ಅವಕಾಶ ನೀಡಿದರು. ಅಮ್ಮನ ಮಾತು ಯಾವಾಗಲೂ ನಿಜವಾಗುತ್ತದೆ ಎಂಬುದು ಸಾಬೀತಾಗಿದೆ" ಎಂದರು.